ಹಾಸನ | ರಾಜಕೀಯ ತಿರುವು ಪಡೆದುಕೊಂಡ ಟ್ರಕ್ ಟರ್ಮಿನಲ್ ಕಾಮಗಾರಿ: ವಿದ್ಯಾರ್ಥಿಗಳ ಹೋರಾಟಕ್ಕೆ ಜೆಡಿಎಸ್ ಸಾಥ್‌

Update: 2022-04-30 16:58 GMT

ಹಾಸನ: ಎ,30: ನಗರದ ಹೊರವಲಯದ ಹೇಮ ಗಂಗೋತ್ರಿ ಸಮೀಪ ನಿರ್ಮಿಸುತ್ತಿರುವ ಕಾಮಗಾರಿ ನಿಲ್ಲಿಸುವಂತೆ ಶನಿವಾರ ವಿದ್ಯಾರ್ಥಿಗಳು ಮತ್ತು ಕೆಂಚಟ್ಟಹಳ್ಳಿನಿವಾಸಿಗಳು ಮುಂದಾದರು. ಆಗ ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಟ್ರಕ್ ಟರ್ಮಿನಲ್ ವಿಚಾರವಾಗಿ ಕಾಮಗಾರಿ ನಿಲ್ಲಿಸುವಂತೆ ಅನೇಕ ಬಾರಿ ಕೆಂಚಟಹಳ್ಳಿ ಗ್ರಾಮಸ್ಥರು ಹಾಗೂ ಹೇಮಾಗಂಗೋತ್ರಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ವಿರೋಧದ ನಡುವೆಯೂ ನಿರ್ಮಿಸಲು ಶಾಸಕರು ಹೊರಟಿದ್ದರು. ಕೆಲ ದಿನ ಕೆಲಸ ಸ್ಥಗಿತ ಮಾಡಲಾಗಿತ್ತು. ಶನಿವಾರದಂದು ಮತ್ತೆ ಕಾಮಗಾರಿ ಆರಂಭಿಸಿದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಾಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಕೆಂಚಟ್ಟಹಳ್ಳಿ ಹಾಗೂ ಸುತ್ತಮುತ್ತಲಿನ ಮಹಿಳೆಯರು ತಮಗೆ ಈ ಭೂಮಿಯನ್ನು ವಸತಿ ಉದ್ದೇಶಕ್ಕೆ ಬಿಟ್ಟುಕೊಡುವಂತೆ ಆಗ್ರಹಿಸಿ, ಕಟ್ಟುತ್ತಿರುವ ಕಾಂಪೌಂಡ್‌ ಕೆಡವಲು ಮುಂದಾದರು. ಪೊಲೀಸರು ಸಕಾಲಕ್ಕೆ ಬಂದು ತಡೆದರು. ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

ನಂತರ ಗ್ರಾಮಸ್ಥರು ಸ್ಥಳದಲ್ಲೇ ಪ್ರತಿಭಟನೆ ನಡೆಸಲು ನಿರ್ಧರಿಸಿದರೂ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರು ಮುಂದಾದರು. ಸ್ಥಳಕ್ಕೆ ಬಂದ ರೇವಣ್ಣ ಅವರು ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದರು. ಆದರೂ ಕಾಮಗಾರಿ ಮುಂದುವರಿಸಲು ಹೋದಾಗ ಪಟ್ಟು ಬಿಡದೇ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕೆಲಸ ನಿಲ್ಲಿಸಿ, ಇಲ್ಲವಾದರೆ ನಾವೇ ನಿಲ್ಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News