ನ್ಯಾಯಾಂಗ ಮೂಲಸೌಕರ್ಯ ಹೆಚ್ಚಿಸಲು ಪ್ರಾಧಿಕಾರ ರಚನೆಗೆ ಸೂಚನೆ: ಸಿಎಂ ಬೊಮ್ಮಾಯಿ

Update: 2022-04-30 17:14 GMT

ಹೊಸದಿಲ್ಲಿ, ಎ.30: ನ್ಯಾಯಾಂಗ ಮೂಲಸೌಕರ್ಯ ಹೆಚ್ಚಿಸಲು ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳ ಮತ್ತು ಸಿಜೆಗಳ ಸಮ್ಮೇಳನದಲ್ಲಿ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 

ವಿಶೇಷವಾಗಿ ನ್ಯಾಯಾಂಗ ಮೂಲಸೌಕರ್ಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಯಿತು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾರೆ ಸೇರಿ ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡಬೇಕೆನ್ನುವುದು ಸುಪ್ರೀಂಕೋರ್ಟ್‍ನ ಬಯಕೆ. ಅದರಂತೆ ರಾಜ್ಯದಲ್ಲಿ ಒಂದು ಪ್ರಾಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚಿಸುವಂತೆ ಸೂಚಿಸಲಾಯಿತು. ಆ ಸಮಿತಿಯಲ್ಲಿ ಮುಖ್ಯಮಂತ್ರಿಗಳು, ಕಾನೂನು ಸಚಿವರು, ಹಿರಿಯ ಅಧಿಕಾರಗಳಿರಬೇಕು. ಅವರ ಮೂಲಕ ಮೂಲಭೂತಸೌಕರ್ಯಗಳನ್ನು ಒದಗಿಸಬೇಕು ಹಾಗೂ ಮೇಲ್ವಿಚಾರಣೆಯನ್ನೂ ಕೈಗೊಳ್ಳಬೇಕು ಎಂದು ತಿಳಿಸಲಾಯಿತು ಎಂದು ಅವರು ಹೇಳಿದರು. 

ಹುದ್ದೆಗಳ ಭರ್ತಿಗೆ ಸೂಚನೆ: ಅತಿ ಶೀಘ್ರದಲ್ಲಿ ಎಲ್ಲರಿಗೂ ನ್ಯಾಯ ಸಿಗಲು ನ್ಯಾಯದಾನ ವ್ಯವಸ್ಥೆಯನ್ನು ಬಲಪಡಿಸಬೇಕು. ಕೇವಲ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಅಷ್ಟೇ  ಅಲ್ಲ, ಆರ್ಥಿಕವಾಗಿ ದೇಶವನ್ನು ಬಲಪಡಿಸುವ ಬಗ್ಗೆಯೂ ಚರ್ಚೆಯಾಯಿತು. ನ್ಯಾಯಮೂರ್ತಿಗಳ ಹುದ್ದೆಗಳು ಎಲ್ಲೆಲ್ಲಿ ಮಂಜೂರಾಗಿದೆಯೋ ಅವುಗಳನ್ನು ಕೂಡಲೇ ಭರ್ತಿ ಮಾಡಲು ಸೂಚಿಸಲಾಗಿದೆ ಎಂದರು.

ಪ್ರಮುಖ ನಿರ್ಣಯಗಳು

ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಸಮಯ ನಿಗದಿ ಮಾಡಲಾಗಿದೆ. ನ್ಯಾಯಮೂರ್ತಿಗಳ ಹುದ್ದೆ ಖಾಲಿಯಾಗುವ ಆರು ತಿಂಗಳು ಮುನ್ನವೇ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿ ಆರು ತಿಂಗಳೊಳಗೆ ಮುಗಿಯಬೇಕು. ರಾಜ್ಯ ಮಟ್ಟದಲ್ಲಿ, ಕೇಂದ್ರ ಮಟ್ಟದಲ್ಲಿ ಹಾಗೂ ಸುಪ್ರೀಂಕೋರ್ಟ್‍ನಲ್ಲಿ ಎಷ್ಟು ದಿನಗಳು ಎನ್ನುವುದನ್ನು ಈಗಾಗಲೇ ಇರುವ ತೀರ್ಪಿನಂತೆ ಮಾಡಬೇಕು. ಕೆಳಹಂತದ ಅಧಿಕಾರಿಗಳನ್ನು ತುಂಬುವ ಕೆಲಸವೂ ಆಗಬೇಕು ಎಂಬ ಪ್ರಮುಖ ನಿರ್ಣಯಗಳು ಸಮ್ಮೇಳನದಲ್ಲಿ ಆಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News