×
Ad

ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ: ಇಲಾಖಾ ಸಚಿವರಿಗೆ ಅಧಿಕಾರ

Update: 2022-05-01 16:19 IST

ಬೆಂಗಳೂರು, ಮೇ 1: 2022-23ನೆ ಸಾಲಿಗೆ ಸರಕಾರಿ ಗ್ರೂಪ್ ‘ಎ', ಗ್ರೂಪ್ ‘ಬಿ', ಗ್ರೂಪ್ ‘ಸಿ' ಹಾಗೂ ಗ್ರೂಪ್ ‘ಡಿ' ವರ್ಗದ ಅಧಿಕಾರಿ/ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಕಲ್ಪಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

2022ರ ಮೇ 1ರಿಂದ ಜೂನ್ 15ರ ವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಸಂಬಂಧಪಟ್ಟ ಆಯಾ ಇಲಾಖೆ ಸಚಿವರಿಗೆ ಅಧಿಕಾರ ನೀಡಲಾಗಿದೆ. ಎಲ್ಲ ಇಲಾಖೆಗಳ ಗ್ರೂಪ್ ‘ಎ, ಬಿ, ಸಿ ಮತ್ತು ಡಿ' ವರ್ಗದ ಅಧಿಕಾರಿ ಮತ್ತು ನೌಕರರಿಗೆ ಅನ್ವಯವಾಗುವಂತೆ ಜೇಷ್ಟತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಈ ಮೊದಲು ಮೇ ಮತ್ತು ಜೂನ್ ತಿಂಗಳಲ್ಲಿ ಶೇ.4ರಿಂದ 5ರಷ್ಟು ಅಧಿಕಾರಿ/ನೌಕರರ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. 2020-21ನೆ ಸಾಲಿನಿಂದ ಶೇ.6ರಷ್ಟು ಮೀರದಂತೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್. ಅವರು ಆದೇಶ ಹೊರಡಿಸಿದ್ದಾರೆ.

ಈ ಬಾರಿ ಅಧಿಕಾರಿ ಮತ್ತು ನೌಕರರಿಗೆ ಜೇಷ್ಟತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ. 6 ರಷ್ಟು ಮೀರದಂತೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆ ಜೂನ್ 15ರೊಳಗೆ ಮುಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನೌಕರರ ವರ್ಗಾವಣೆಯ ಮಾರ್ಗಸೂಚಿಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News