ಹುಬ್ಬಳ್ಳಿ ದಾಂಧಲೆ ಪ್ರಕರಣ: 154 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ಮೇ 13ರ ವರೆಗೆ ವಿಸ್ತರಣೆ

Update: 2022-05-01 13:36 GMT

ಹುಬ್ಬಳ್ಳಿ, ಮೇ 1: ಹಳೇ ಹುಬ್ಬಳ್ಳಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ 154 ಮಂದಿ ಆರೋಪಿಗಳಿಗೆ ಮೇ 13ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಒಂದನೆ ಸೇಷನ್ ಕೋರ್ಟ್‍ನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು. 20 ಆರೋಪಿಗಳ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷೆ ಕಾರಣಕ್ಕೆ ಒಬ್ಬ ಆರೋಪಿ ಪರ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇನ್ನುಳಿದ ಆರೋಪಿ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ.

ಆರೋಪಿಗಳಿಗೆ ಜಾಮೀನು ದೊರೆತರೆ ಸಾಕ್ಷಿ ನಾಶಪಡಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯಿದೆ ಎಂದು ಪೆÇಲೀಸರು ಆಕ್ಷೇಪಣೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಎ.16ರ ಗಲಭೆ ನಂತರ ಬಂಧಿತರಾದ ಎಲ್ಲ ಆರೋಪಿಗಳನ್ನು ಎ. 30ರ ವರೆಗೆ ನ್ಯಾಯಾಂಗ ವಶದಲ್ಲಿ ಇಡಲಾಗಿತ್ತು.

ಅಭಿಷೇಕ್ ಹಿರೇಮಠ ಆಕ್ಷೇಪಾರ್ಹ ಸ್ಟೇಟಸ್ ಇಟ್ಟಿದ್ದಾನೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ದೂರುದಾರ ಹಾಗೂ ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬಂಧಿತನಾಗಿ ನ್ಯಾಯಾಂಗ ವಶದಲ್ಲಿದ್ದ ಮಹ್ಮದ್ ಅಜರುದ್ದೀನ್ ಜಿಲ್ಲೇರಿ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆಗಾಗಿ ನ್ಯಾಯಾಲಯ ಅವನನ್ನು ಮೇ 2ರವರೆಗೆ ಪೊಲೀಸ್ ಕಸ್ಟಡಿ ಒಪ್ಪಿಸಿದೆ.

ದೂರುದಾರ ಮಹ್ಮದ್ ಅಜರುದ್ದೀನ್ ಕೆಲವರಿಗೆ ಪ್ರಚೋದನೆ ನೀಡಿ ಗಲಭೆಗೆ ಕಾರಣವಾಗಿರಬಹುದು ಎನ್ನುವ ಕುರಿತು ಹಾಗೂ ಸ್ಟೇಟಸ್ ಸಂಬಂಧಿಸಿ ಕೆಲವಷ್ಟು ಮಾಹಿತಿ ಸಂಗ್ರಹಿಸಲು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News