ವೈದ್ಯಕೀಯ ಕಾಲೇಜು ಜಿಲ್ಲಾಸ್ಪತ್ರೆ ಆವರಣ ಹೊರತು ಬೇರೆ ಸ್ಥಳದಲ್ಲೇ ನಿರ್ಮಿಸಲು ಸಿಎಂಗೆ ಮನವಿ

Update: 2022-05-01 14:10 GMT

ಬೆಂಗಳೂರು, ಮೇ 1: ‘ಚಿತ್ರದುರ್ಗ ಸರಕಾರಿ ವೈದ್ಯಕೀಯ ಕಾಲೇಜು ನೂತನ ಕಟ್ಟಡವನ್ನು ಜಿಲ್ಲಾಸ್ಪತ್ರೆ ಅವರಣವನ್ನು ಹೊರತು ಭೂಮಿ ಮಂಜೂರು ಮಾಡಿರುವ ಹಿರೇಗುಂಟನೂರು ಹೋಬಳಿ, ಚಿಕ್ಕಪುರ ಗ್ರಾಮದ ವ್ಯಾಪ್ತಿಯಲ್ಲೇ ನಿರ್ಮಿಸಬೇಕು' ಎಂದು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ರವಿವಾರ ಇಲ್ಲಿನ ಕೆಂಗೇರಿಯ ರಾಮಾನುಜ ಮಠದಲ್ಲಿ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಮುಖ್ಯಮಂತ್ರಿಗಳಿಗೆ ಕೃತಜ್ಞತಾ ಸಮಾರಂಭದಲ್ಲಿ ಒಕ್ಕೂಟದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು, ‘ಚಿತ್ರದುರ್ಗ ಸರಕಾರಿ ವೈದ್ಯಕೀಯ ಕಾಲೇಜ್ ಬರುತ್ತಿರುವುದು ನಮ್ಮಗೆಲ್ಲ ಬಹಳ ಸಂತೋಷದ ವಿಚಾರ. ಆದರೆ, ನೂತನ ಕಾಲೇಜು ಕ್ಯಾಂಪಸ್‍ನ್ನು ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಇಟ್ಟುಕೊಂಡು ಬೇರೆ ಜಾಗದಲ್ಲಿ ನಿರ್ಮಾಣ ಮಾಡಬೇಕು' ಎಂದು ಕೋರಲಾಗಿದೆ.

‘ನೂತನ ವೈದ್ಯಕೀಯ ಕಾಲೇಜಿಗೆ ಹಿರೇಗುಂಟನೂರು ಹೋಬಳಿ, ಚಿಕ್ಕಪುರ ಗ್ರಾಮದಲ್ಲಿ ಸರ್ವೇ ನಂ.96ರಲ್ಲಿ 15 ಎಕರೆ ಮಂಜೂರು ಆಗಿದೆ. ಇದರ ಜೊತೆಗೆ ಸರ್ವೇ ನಂ.101ರಲ್ಲಿ 14 ಎಕರೆ ಒಟ್ಟಾಗಿ 30 ಎಕರೆ ಮಂಜೂರಾಗಿದೆ. ಕುಂಚಿಗನಾಳ್ ಗ್ರಾಮದಲ್ಲಿಯೂ 30 ಎಕರೆ ಗೋಮಾಳ ಭೂಮಿ ಮಂಜೂರು ಮಾಡಿಸಬಹುದು. ಹೀಗಾಗಿ ಮೇಲ್ಕಂಡ ಜಾಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು' ಎಂದು ಮನವಿ ಮಾಡಿದ್ದಾರೆ.

‘ಈಗಿರುವ ಜಿಲ್ಲಾಸ್ಪತ್ರೆಯ ಒಟ್ಟು 25 ಎಕರೆ ವಿಸ್ತೀರ್ಣದಲ್ಲಿ ಕೇವಲ 6 ಎಕರೆ ಜಾಗ ಮಾತ್ರ ಲಭ್ಯವಿರುತ್ತದೆ.  ಸದರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ಜಿಲ್ಲಾಸ್ಪತ್ರೆಯ ಅವರಣದಲ್ಲಿ ಇರುವ ಸುಸಜ್ಜಿತ ಕಟ್ಟಡಗಳನ್ನು ತೆರವುಗೊಳಿಸಿ ನೀಲಿನಕ್ಷೆ ಸಿದ್ದಪಡಿಸಿರುತ್ತಾರೆ. ರಕ್ತನಿಧಿ ಕೇಂದ್ರ, ಔಷಧಿ ಉಗ್ರಾಣ ಕೇಂದ್ರ, ವೈದ್ಯರು ಮತ್ತು ಶೂಶ್ರಕರ ವಸತಿ ಗೃಹಗಳು, ಜಿಲ್ಲಾ ಆರೋಗ್ಯಧಿಕಾರಿಗಳ ಕಚೇರಿ, ಜಿಲ್ಲಾ ತರಬೇತಿ ಕೇಂದ್ರ ಇವೆಲ್ಲೆವೂ ಸುಸಜ್ಜಿತ ಕಟ್ಟಡಗಳಾಗಿವೆ. ತೆರವುಗೊಳಿಸಿದ್ದಲ್ಲಿ ಕೋಟ್ಯಾಂತರ ರೂ.ನಷ್ಟವಾಗುತ್ತವೆ. ಪರ್ಯಾಯ ವ್ಯವಸ್ಥೆ ಮಾಡಲುಮತ್ತು ಸಾರ್ವಜನಿಕರಿಗೆ ಆರೋಗ್ಯ ವ್ಯವಸ್ಥೆ ಕೊಡಲು ತೊಂದರೆಗಳು ಅನುಭವಿಸಬೇಕಾಗುತ್ತದೆ' ಎಂದು ಒಕ್ಕೂಟ ಗಮನ ಸೆಳೆದಿದೆ.

‘ಜಿಲ್ಲಾಸ್ಪತ್ರೆಯ ಅವರಣದಲ್ಲಿ ಲಭ್ಯವಿರುವ ಆರು ಎಕರೆ ಅವರಣದಲ್ಲಿ ನರ್ಸಿಂಗ್ ಕಾಲೇಜು ಮತ್ತು ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ  ಕಾಲೇಜು ಮತ್ತು ಹಾಸ್ಟೆಲ್ ಸೌಲಭ್ಯ ಒದಗಿಸಿದ್ದಲ್ಲಿ ಆಸ್ಪತ್ರೆಗಳಿಗೆ ಅಲ್ಲದೆ ಸಾವಿರಾರು ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಒಳ್ಳೆ ವಾತಾವರಣ ನಿರ್ಮಾಣ ಮಾಡಿದಂತಾಗುತ್ತದೆ. ಜತೆಗೆ ವೈದ್ಯಕೀಯ ಕಾಲೇಜ್ ಹೆಚ್ಚು ಸ್ಥಳ ಬೇಕಾಗಿರುವುದರಿಂದ ವಿಶಾಲವಾದ ಜಾಗದಲ್ಲಿ ನೂತನ ಕಾಲೇಜು ಸ್ಥಾಪಿಸುವುದು ಸೂಕ್ತ' ಎಂದು ಒಕ್ಕೂಟ ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News