×
Ad

ಯುವತಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣ: ಆರೋಪಿ ವಿರುದ್ಧ ಲುಕ್‍ ಔಟ್ ನೋಟಿಸ್ ಜಾರಿ

Update: 2022-05-01 20:42 IST
ಆರೋಪಿ ನಾಗೇಶ್

ಬೆಂಗಳೂರು, ಮೇ 1: ಇಲ್ಲಿನ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ಸಂಬಂಧ ಆರೋಪಿ ನಾಗೇಶ್ ಪತ್ತೆಗಾಗಿ ಪೊಲೀಸರು ಲುಕ್‍ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಎಲ್ಲ ರಾಜ್ಯಗಳಿಗೆ ಹಾಗೂ ಎಲ್ಲ ಭಾಷೆಗಳಲ್ಲೂ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಪೊಲೀಸರು, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಿಗೂ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆ ಚುರುಕು: ಆರೋಪಿ ನಾಗೇಶ್ ಕೃತ್ಯ ಪೂರ್ವ ಯೋಜಿತವಾಗಿತ್ತೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕೃತ್ಯ ನಡೆಸಿದ ನಂತರ ಆರೋಪಿ ವಕೀಲರನ್ನು ಸಂಪರ್ಕಿಸಿ ತನ್ನ ಮೊಬೈಲ್ ಸಂಪರ್ಕ ಕಡಿತಗೊಳಿಸಿ ಪರಾರಿಯಾಗಿದ್ದಾನೆ. ಈವರೆಗೂ ಯಾರನ್ನೂ ಆತ ಸಂಪರ್ಕಿಸಿಲ್ಲ ಎಂಬುದು ಪೊಲೀಸರ ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ.

ಈತ ಗಾಮೆರ್ಂಟ್ಸ್ ನಡೆಸುತ್ತಿದ್ದು, ಯಂತ್ರೋಪಕರಣಗಳನ್ನು ಮಾರಾಟ ಮಾಡಿ ತನ್ನ ಎಲ್ಲ ಸಾಲವನ್ನು ತೀರಿಸಿ ಉಳಿದ ಹಣವನ್ನು ಜೊತೆಯಲ್ಲೇ ತೆಗೆದುಕೊಂಡಿರುವ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. 

ಇನ್ನೂ, ಈತನ ಬಂಧನಕ್ಕಾಗಿ ರಚಿಸಿರುವ 7 ತಂಡಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ನಿರಂತರ ಶೋಧ ನಡೆಸುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆರೋಪಿಯ ತಂದೆ-ತಾಯಿ, ಸಹೋದರ, ಸ್ನೇಹಿತರು ಸೇರಿದಂತೆ ಸಂಬಂಧಿಕರನ್ನು ಕರೆತಂದು ವಿಚಾರಣೆ ನಡೆಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮತ್ತೊಂದೆಡೆ, ಸೆಂಟ್‍ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಯುವತಿ ಚೇತರಿಸಿಕೊಳ್ಳುತ್ತಿದ್ದು, ಆಕೆಯಿಂದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಳಿಕೆ ಪಡೆಯಲಾಗಿದೆ.ಜತೆಗೆ, ಗುಣಮಟ್ಟ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೈಡ್ರೋ ಆ್ಯಸಿಡ್..!: ಆರೋಪಿಯೂ ಯುವತಿಯ ಮೇಲೆ ಎರಚಿರುವುದು ಹೈಡ್ರೋ ಕ್ಲೋರಿಕ್ ಆ್ಯಸಿಡ್(ಎಚ್‍ಸಿಎಲ್) ಎಂದು ಎಫ್‍ಎಸ್‍ಎಲ್ ತನಿಖೆಯಲ್ಲಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News