ರಮಝಾನ್ ಉಪವಾಸ ಸೌಹಾರ್ದತೆ ಸಂದೇಶವಾಗಿದೆ: ಚಿಂತಕ ಕೆ ದೊರೈರಾಜ್

Update: 2022-05-01 18:40 GMT

ತುಮಕೂರು.ಮೇ.01:ರಂಜಾನ್ ಉಪವಾಸ ಮನುಷ್ಯನಲ್ಲಿರುವ ಕ್ರೌರ್ಯವನ್ನು ದಹಿಸಿ ಹಸಿವಿನ ಅನುಭವವನ್ನು ಕಲಿಸುವುದರಿಂದ ಸಮಾಜದಲ್ಲಿ ಸೌಹಾರ್ಧಯುತವಾಗಿ ಬದುಕುವ ಸಂದೇಶ ನೀಡುತ್ತದೆ ಸಮಾಜದಲ್ಲಿರುವ ಅಶಕ್ತರನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ ಎಂದು ಹಿರಿಯ ಚಿಂತಕ ಕೆ.ದೊರೆರಾಜು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನ ಎನ್.ಆರ್ ಕಾಲೋನಿ ದಲಿತ ಮತ್ತು ಕೋತಿ ತೋಪು ಮದೀನ ಮಹೊಲ್ಲ ಮುಸ್ಲಿಂ ಸೌಹಾರ್ದ ಸಮಿತಿಯಿಂದ ರಂಜಾನ್ ಹಬ್ಬದ ಅಂಗವಾಗಿ ದಲಿತರಿಂದ ಮುಸ್ಲಿಂ ಬಾಂಧವರಿಗೆ ಸಮುದಾಯ ಶೈಕ್ಷಣಿಕ ಭವನದಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ಮನುಷ್ಯ ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಬದುಕುವಂತಾಗಬೇಕು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ ಸರಿಯಲ್ಲ ಎಂದರು.

ಎಲ್ಲಿ ಶಾಂತಿ ಮತ್ತು ಪ್ರೀತಿ ಇರುತ್ತದೆಯೋ ಅಲ್ಲಿ ಮಾನವ ವಿಕಾಸದ ಜಗತ್ತಿನ ಉಳಿವು ಇರುತ್ತದೆ. ಎಲ್ಲಿ ಧ್ವೇಷ ಅಸೂಯೆ ಇರುತ್ತದೆಯೋ ಅಲ್ಲಿ ಜಗತ್ತಿನ ನಾಶ ಮತ್ತು ಮಾನವ ವಿಕಾಸದ ನಾಶವಾಗುತ್ತದೆ.ಇತ್ತೀಚಿನ ಬೆಳವಣಿಗೆಗಳು ನಮ್ಮಲ್ಲಿರುವ ಒಗ್ಗಟ್ಟನ್ನು ಒಡೆಯುವುದಲ್ಲದೆ, ನಮ್ಮನ್ನು ಮತ್ತಷ್ಟು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುತ್ತಿದೆ ಎಂದು ದೊರೆರಾಜು ವಿಷಾದ ವ್ಯಕ್ತಪಡಿಸಿದರು. 

ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಮಾತನಾಡಿ,ಕೆಲವೇ ಸಂಘಟನೆಗಳ ಕೆಲವು ಜನರು ಮನುಷ್ಯ ವಿರೋಧಿಯಾಗಿ ನಡೆಯುತ್ತಿದ್ದಾರೆ.ಯಾವ ಧರ್ಮ ಮನುಷ್ಯನನ್ನು ಕೊಲ್ಲಲು ಹೇಳುವುದಿಲ್ಲ ಹಿಂದು, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಮನುಷ್ಯತ್ವವನ್ನು ಸಾರುತ್ತವೆ.ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ದೇಶ ಕಟ್ಟುವ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಈ ಭಾಗದ ದಲಿತರು ಮುಸ್ಲಿಂ ಭಾಂದವರಿಗೆ ನೀಡುತ್ತಿರುವ ಇಫ್ತಾರ್ ಸೋದರತೆಯ ಭಾಗವಾಗಿದೆ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ಸಾಹಿತಿಗಳಾದ ಮುನೀರ್ ಅಹ್ಮದ್ ಮಾತನಾಡಿ,ನಮಗೆ ದಲಿತರು ನೀಡಿದ ಔತಣದಿಂದ ಹಿಂದೆ ರಂಜಾನ್ ಹಬ್ಬ ಆಚರಿಸಿದಂತೆ ಆಗಿದೆ ಸಮಾಜದಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಸಿದ್ದಲ್ಲಿ ನೆಮ್ಮದಿಯ ಬದುಕು ಸಾಧ್ಯ ಎಂದರು. 

ಇಫ್ತಾರ್ ಕೂಟದ ಅಧ್ಯಕ್ಷತೆ ವಹಿಸಿದ್ದ ದಸಂಸದ ಹಿರಿಯ ಮುಖಂಡ ನರಸಿಂಹಯ್ಯ ಮಾತನಾಡಿ,ಎನ್.ಆರ್ ಕಾಲೋನಿ ಮತ್ತು ಕೋತಿ ತೋಪಿನಲ್ಲಿರುವ ದಲಿತರು ಹಾಗೂ ಮುಸ್ಲಿಂ ಬಾಂಧವರು ನೂರಾರು ವರ್ಷಗಳಿಂದ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ. ಮತೀಯವಾದಿಗಳಿಗೆ ಇಫ್ತಾರ್ ಕೂಟದಿಂದ ತಕ್ಕ ಉತ್ತರ ನೀಡಿದ್ದೇವೆ ಎಂದರು. 

ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ನಾಗಣ್ಣ,ಜಿಲ್ಲಾ ಕಾಂಗ್ರೇಸ್ ರಾಮಕೃಷ್ಣಯ್ಯ, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಅಲ್ಪಸಂಖ್ಯಾತ ಮುಖಂಡರಾದ ತಾಜುದ್ದೀನ್ ಷರೀಫ್, ಡಾ.ಡಿ.ಮುರುಳಿಧರ್, ನಗರಪಾಲಿಕೆ ಸದಸ್ಯರುಗಳಾದ ರೂಪಶ್ರೀ, ನಯಾಜ್ ಅಹ್ಮದ್, ಇನಾಯತ್ ಉಲ್ಲಾ  ಉಪಸ್ಥಿತರಿದ್ದು, ಶುಭಾಷಯ ಕೋರಿದರು. ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ,ಮುತ್ವಲಿ ಸಾವಾಜ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News