ಕಲ್ಲು ಹೊಡೆದು ಓಡುವ ಗುಣ ಕಾಂಗ್ರೆಸ್ಸಿಗರದು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್
Update: 2022-05-02 17:41 IST
ವಿಜಯನಗರ: ಪಿಎಸ್ ಐ ಪರೀಕ್ಷೆ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಶುದ್ಧಹಸ್ತರಂತೆ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರದ್ದು ಕಲ್ಲು ಹೊಡೆದು ಓಡುವ ಗುಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಅಕ್ರಮ ನಡೆದಿರುವ ಬಗ್ಗೆ ತಿಳಿದ ತಕ್ಷಣವೇ ನಮ್ಮ ಸರ್ಕಾರ ಸಿಐಡಿಯಿಂದ ತನಿಖೆ ಆರಂಭಿಸಿತು. ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ನಮ್ಮ ಪಕ್ಷವಾಗಲಿ, ಸರಕಾರವಾಗಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಪ್ರಕರಣದಲ್ಲಿ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಬಿಡುವುದಿಲ್ಲ ಎಂದು ತಿಳಿಸಿದರು.
ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ತನಿಖೆಯಲ್ಲಿ ಕಾಂಗ್ರೆಸ್ ತಲೆಗಳೇ ಹೆಚ್ಚು ಉರುಳುತ್ತವೆ. ನಮ್ಮವರ ತಲೆಗಳು ಉರುಳುತ್ತವೆ ಎಂಬ ಭಯದಿಂದಲೇ ಈಗ ಗೊಂದಲಕಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.