ಅಂಬೇಡ್ಕರ್ ಆಶಯಗಳ ಈಡೇರಿಕೆಗೆ ಬಿಜೆಪಿ ಸೇರಿ: ಶಾಸಕ ಎನ್.ಮಹೇಶ್

Update: 2022-05-02 12:51 GMT
 ಎನ್.ಮಹೇಶ್

ಮಂಡ್ಯ, ಮೇ 2: ಪರಿಶಿಷ್ಟರ ಅಭಿವೃದ್ಧಿಗೆ ಪ್ರಧಾನಿ ಮೋದಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ನನ್ನ ಬೆಂಬಲಿಗರು ಬಿಜೆಪಿ ಸೇರಬೇಕು ಎಂದು  ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮನವಿ ಮಾಡಿದ್ದಾರೆ.

ನಗರದದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಏರ್ಪಡಿಸಿದ್ದ ಶಾಸಕ ಮಹೇಶ್ ಅಭಿಮಾನಿಗಳ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ವಿಶ್ವಮಟ್ಟದಲ್ಲಿ ಗೌರವ ತಂದುಕೊಟ್ಟ ಕಾರಣಕ್ಕೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದರು.

ಕುಮಾರಸ್ವಾಮಿ ಸರಕಾರದ ಪತನವಾದ ಐದೇ ನಿಮಿಷದಲ್ಲಿ ನನ್ನನ್ನು ಬಿಎಸ್ಪಿಯಿಂದ ಉಚ್ಚಾಟನೆ ಮಾಡಲಾಯಿತು. ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಯಿತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಂಡಿತು ಎಂದು ಅವರು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ಮತ್ತು ಶೋಷಿತ ಸಮುದಾಯಗಳ ಹಿತಕಾಯಲು ಬದ್ಧನಾಗಿದ್ದೇನೆ. ಕಾನ್ಶೀರಾಂಜೀ ಅವರ ವಿಚಾರಧಾರೆಗಳು ನನ್ನ ರಕ್ತದ ಕಣಕಣದಲ್ಲಿವೆ. ಮೆದುಳಿನಲ್ಲಿ ಡಾ.ಬಾಬಾಸಾಹೇಬರ ಆಶಯಗಳಿವೆ. ಇವುಗಳ ಜಾರಿಗಾಗಿ ಜೀವವಿರುವವರೆಗೂ ಹೋರಾಡುತ್ತೇನೆ ಎಂದು ಅವರು ಹೇಳಿಕೊಂಡರು.

ಇದೇ ಸಂದರ್ಭದಲ್ಲಿ  ಎನ್.ಮಹೇಶ್ ಅವರ ಅನೇಕ ಬೆಂಬಲಿಗರು ಬಿಜೆಪಿ ಸೇರ್ಪಡೆಗೊಂಡು ತತ್ವಸಿದ್ದಾಂತಗಳ ಅನುಸಾರ ಪಕ್ಷಸಂಘಟನೆಯಲ್ಲಿ ತೊಡಗುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದರು.

ಮಾಜಿ ಶಾಸಕ ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್,  ಎಸ್ಸಿ ಮೋರ್ಚಾ ಅಧ್ಯಕ್ಷ ನಿತ್ಯಾನಂದ, ಕಾರ್ಯದರ್ಶಿ ಪರಮಾನಂದ, ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ವೆಂಕಟರಾಜು, ಎಚ್.ಆರ್.ಅರವಿಂದ್, ಯಮದೂರು ಸಿದ್ದರಾಜು, ಶಂಕರ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News