VIDEO | ಸಚಿವ ಅಶ್ವತ್ಥ ನಾರಾಯಣ್ ಮೌನಿ ಬಾಬಾ ಆಗಿರುವುದೇಕೆ: ವಿ.ಎಸ್.ಉಗ್ರಪ್ಪ ಪ್ರಶ್ನೆ

Update: 2022-05-02 13:42 GMT

ಬೆಂಗಳೂರು, ಮೇ 2: ‘ಪಿಎಸ್ಸೈ ಹುದ್ದೆಗೆ ಮಾಗಡಿ ತಾಲೂಕಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿ ದರ್ಶನ್ ಗೌಡರಿಂದ 80ಲಕ್ಷ ರೂ.ಗೂ ಹೆಚ್ಚಿನ ಹಣ ಪಡೆಯಲಾಗಿದ್ದು, ಪ್ರಭಾವಿ ಸಚಿವರ ಸಹೋದರನ ಮೇಲೆ ಆರೋಪವಿದೆ. ಆ ಪ್ರಭಾವಿ ಸಚಿವರು ಕರೆ ಮಾಡಿ ಆ ಅಭ್ಯರ್ಥಿಯನ್ನು ವಿಚಾರಣೆಯಿಂದ ಬಿಡುಗಡೆಗೊಳಿಸಿದ್ದಾರೆ. ಅವರು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವರಾದ ಅಶ್ವತ್ಥ ನಾರಾಯಣ್. ಈ ವಿಚಾರದಲ್ಲಿ ಅವರು ಮೌನಿ ಬಾಬಾ ಆಗಿರುವುದೇಕೆ?' ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗರಾಜ್ ಹಾಗೂ ಸೌಮ್ಯ ಅವರ ಬಂಧನವಾಗಿದ್ದು, ಆ ಪ್ರಕರಣದಲ್ಲೂ ಮೌನಿ ಬಾಬಾ ಆಗಿದ್ದೀರಿ. ನಿಮ್ಮ ವರ್ತನೆ ನೋಡಿದರೆ ನಿಮ್ಮ ಕೈವಾಡ ಇರುವ ಸಂಶಯವಾಗುತ್ತಿದೆ. ಇಲ್ಲದಿದ್ದರೆ, ಈ ವಿಚಾರದ ಬಗ್ಗೆ ಮಾತನಾಡಬೇಕಿತ್ತು' ಎಂದು ಹೇಳಿದರು.

‘ನೀವು ನನ್ನ ಇಲಾಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದು ಹೇಳಿದರೆ ಬಂಧನ ಆಗಿದ್ದು ಏಕೆ ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಮೂವರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಿಮ್ಮ ಸಹೋದರ ಭಾಗಿಯಾಗಿರುವ ವಿಚಾರವಾಗಿ ಜನ ಮಾತನಾಡುತ್ತಿರುವಾಗ ನೀವು ಮೌನವಾಗಿದ್ದು, ‘ಮೌನಂ ಸರ್ವ ಸಮ್ಮತಂ ಎಂಬಂತಾಗಿದೆ'. ಪ್ರಕರಣ ನಡೆಯುತ್ತಿರುವ ಸಮಯದಲ್ಲಿ ಈ ಪ್ರಕರಣ ಅಶ್ವತ್ ನಾರಾಯಣ ಹಾಗೂ ಅವರ ಸಹೋದರನ ವಿರುದ್ಧ ಬೆರಳು ತೋರುತ್ತಿದೆ. ಅವರು ಇದುವರೆಗೂ ಸಾಕಷ್ಟು ಬಾರಿ ‘ಗಂಡಸ್ತನ'ದ ಬಗ್ಗೆ ಮಾತನಾಡಿದ್ದು, ನಿಮಗೆ ಗಂಡಸ್ತನ, ತಾಕತ್ತು ಎಂಬುದು ಇದ್ದರೆ, ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ನಿಮಗೆ ಹಾಗೂ ಗೃಹ ಸಚಿವರಿಗೆ ನೈತಿಕತೆ ಇದ್ದರೆ ಕೂಡಲೇ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು' ಎಂದು ಉಗ್ರಪ್ಪ ಸವಾಲು ಹಾಕಿದರು.

‘1970ರ ಸಮಾರಿನಲ್ಲಿ ಎಂ.ವಿ.ರಾಮರಾಯರು ಎಂಬ ಗೃಹ ಸಚಿವರಿದ್ದರು, ತಮ್ಮ ಇಲಾಖೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಕೈಮಾಡಿದರು ಎಂಬ ಕಾರಣಕ್ಕೆ ಅವರು ಗೃಹ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ರೈಲ್ವೆ ಅಪಘಾತ ಆದಾಗ ತಮ್ಮ ಪಾತ್ರ ಇಲ್ಲದಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು' ಎಂದು ಉಲ್ಲೇಖಿಸಿದರು.

‘ರಾಜ್ಯದ ಯುವಕರ ಭವಿಷ್ಯ ಸಮಾಧಿ ಮಾಡುವ ಯತ್ನ ನಡೆಯುತ್ತಿದ್ದು, ಇದಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಹೀಗಾಗಿ ಸಚಿವರುಗಳು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸಿಎಂ ಅವರನ್ನು ವಜಾಗೊಳಿಸಬೇಕು. ಸಿಎಂ ಮಾಡದಿದ್ದರೆ ಪ್ರಧಾನಿ ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು. ಆಗ ಅವರ ಮಾತಿಗೂ ಸಾರ್ಥಕತೆ ಬರುತ್ತದೆ. ಇಲ್ಲವಾದರೆ ಈ ರಾಜ್ಯದ ಯುವಕರು, ಉದ್ಯೋಗಾಕಾಂಕ್ಷಿಗಳು ಸರಕಾರದ ವಿರುದ್ಧ ಸಿಡಿದೇಳುವ ದಿನಗಳು ದೂರ ಇಲ್ಲ ಎಂದು ಉಗ್ರಪ್ಪ ಎಚ್ಚರಿಸಿದರು.

‘ಈ ಎಲ್ಲ ವಿಚಾರ ಸುತ್ತುತ್ತಿರುವುದು ರಾಮನಗರ ಜಿಲ್ಲೆಯಲ್ಲಿ. ಪ್ರಭಾವಿ ಸಚಿವರು ಎಂದು ಮಾಧ್ಯಮಗಳಲ್ಲಿ ಪ್ರಕಟಿಸುತ್ತಿದ್ದರೂ ರಾಮನಗರ ಜಿಲ್ಲಾ ಮಂತ್ರಿ ಬಾಯಿ ಬಿಡುತ್ತಿಲ್ಲ ಏಕೆ? ನೋಟಿಸ್ ಕೊಟ್ಟಿರುವ ದರ್ಶನ್ ಗೌಡನನ್ನು ಇದುವರೆಗೂ ಬಂಧಿಸಿಲ್ಲ ಏಕೆ? ಈ ಹಗರಣದಲ್ಲಿ ಅಕ್ರಮ ಮಾಡಿರುವ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಅಲ್ಲವೇ? ಆದರೂ ಅವರ ಬಂಧನ ಏಕಿಲ್ಲ? ಆತ ಬಂಧನವಾದರೆ ಯಾರಿಗೆ 80 ಲಕ್ಷ ರೂ. ಹಣ ನೀಡಲಾಗಿದೆ ಎಂಬುದು ಬಹರಂಗವಾಗಲಿದೆ ಎಂಬುದು ಬೆಳಕಿಗೆ ಬರುತ್ತ್ತದೆ ಎಂದು ಆತನನ್ನು ಬಂಧಿಸದೆ, ವಿಚಾರಣೆ ನಡೆಸದಂತೆ ಸಂಚು ರೂಪಿಸಲಾಗಿದೆ' ಎಂದು ಉಗ್ರಪ್ಪ ದೂರಿದರು.

‘ಹೀಗಾಗಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಅವರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಆಗ ನೇಮಕಾತಿ ಅಕ್ರಮ, ಕಮಿಷನ್ ಅಕ್ರಮಗಳು ಹೊರಗೆ ಬರಲಿದೆ. ಹೀಗಾಗಿ ಈ ತನಿಖೆ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ ‘ನ ಭೂತೋ ನ ಭವಿಷ್ಯತಿ' ಎನ್ನುವ ಹಾಗೆ, ದೇಶದ ಇತಿಹಾಸದಲ್ಲಿ ಇಂದೆಂದೂ ಕಾಣದಂತೆ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಧಾನಿ ಮೋದಿ ‘ನಾ ಖಾವೂಂಗಾ, ನಾ ಖಾನೇದೂಂಗಾ' ಎಂದು ಹೇಳುತ್ತಾರೆ. ಆದರೆ, ಇದೀಗ ಮೋದಿ ಎಲ್ಲಿದ್ದೀಯಪ್ಪಾ?' ಎಂದು ಉಗ್ರಪ್ಪ ಪ್ರಶ್ನಿಸಿದರು.

ವಕೀಲ ಚಂದ್ರಮೌಳಿ ಮಾತನಾಡಿ, ‘ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣೆ ಮಾಡಿದರೆ, ಮತ್ತೆ ಕೆಲವರನ್ನು ಬಿಟ್ಟು ಕಳುಹಿಸಲಾಗುತ್ತಿದೆ. ಇಂತಹ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಇದು ಯಾವುದೋ ಸಣ್ಣ ಪರೀಕ್ಷೆಯಲ್ಲ. ಇದರಲ್ಲಿ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳು ಅಡಗಿವೆ. ದೈಹಿಕ ಪರೀಕ್ಷೆಯಲ್ಲೇ ಅಕ್ರಮ ನಡೆದಿದೆ ಎಂದಾದರೆ, ಲಿಖಿತ ಮರುಪರೀಕ್ಷೆ ನಡೆಸುವುದರಲ್ಲಿ ಯಾವ ಅರ್ಥವಿದೆ? 545 ಭ್ರಷ್ಟರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದರೆ ಭವಿಷ್ಯದಲ್ಲಿ ಎಂತಹ ಸ್ಥಿತಿ ನಿರ್ಮಾಣ ಆಗಬಹುದು? ವಾಗ್ದಾಳಿ ನಡೆಸಿದರು.

ಬಂಧಿತನನ್ನು ಬಿಡಿಸಿದ್ದು ಯಾರು?

‘ಬಂಧಿüತನಾಗಿದ್ದ ಅಭ್ಯರ್ಥಿ ಬಿಡುಗಡೆ ಮಾಡಿಸಿದವರು ಯಾರು? ಈ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಸತೀಶ್ ಎಂಬುವವರಿಗೆ ಹಣ ನೀಡಿರುವ ಬಗ್ಗೆ ಮಾತನಾಡಿದ್ದು, ಈತ ಸಚಿವರೊಬ್ಬರ ಸಹೋದರನಾಗಿದ್ದಾರೆ. ಗಂಡಸ್ತನದ ಸವಾಲು ಹಾಕಿದವರು, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮದಲ್ಲಿ ಈಗ ಕೆಲವರು ಬಂಧನವಾಗಿದ್ದಾರೆ. 17 ಸಾವಿರ ರೂ.ಲ್ಯಾಪ್‍ಟಾಪ್‍ನ್ನು 28 ಸಾವಿರ ರೂ.ಗಳಿಗೆ ಖರೀದಿ ಮಾಡಿದ್ದ ಶಿಕ್ಷಣ ಸಚಿವರಾಗಿದ್ದಾರೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ'
-ಎಚ್.ಎಂ.ರೇವಣ್ಣ ಮಾಜಿ ಸಚಿವ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News