×
Ad

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಮಂತ್ರಿ ಸಂಬಂಧಿಯೂ ಭಾಗಿ?

Update: 2022-05-02 20:43 IST

ಬೆಂಗಳೂರು, ಮೇ 2: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಮಂತ್ರಿವೊಬ್ಬರ ಸಂಬಂಧಿಗೂ ಸಿಐಡಿ ತನಿಖಾಧಿಕಾರಿಗಳು ನೋಟಿಸ್ ನೀಡಿ, ವಿಚಾರಣೆಗೆ ಕರೆದಿರುವ ವಿಚಾರ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಸಚಿವ ಸಂಪುಟದಲ್ಲಿರುವ ಪ್ರಭಾವಿವೊಬ್ಬರ ಮಂತ್ರಿಯ ಸಂಬಂಧಿ ಎನ್ನಲಾದ ದರ್ಶನ್‍ಗೌಡ ಎಂಬಾತನಿಗೆ ಸಿಐಡಿ ವಿಚಾರಣೆ ಕರೆದಿದೆ. ಈತ ಸಚಿವರ ಸಹೋದರನೊಂದಿಗೆ ಸಂಪರ್ಕ ಬಳಸಿ, ಪಿಎಸ್ಸೈ ಪರೀಕ್ಷೆಯಲ್ಲಿ ಅಕ್ರಮವೆಸಗಿರುವ ಶಂಕೆ ವ್ಯಕ್ತವಾಗಿದೆ.

ನೋಟಿಸ್ ಹಿನ್ನೆಲೆ ಎಪ್ರಿಲ್ 20ರಂದು ಸಿಐಡಿ ಕಚೇರಿಗೆ ದರ್ಶನ್‍ಗೌಡ ಸಿಐಡಿ ಎಫ್‍ಐಯು ಪೊಲೀಸ್ ಉಪಾಧೀಕ್ಷಕರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

22 ಜನರ ವಿರುದ್ಧ ಎಫ್‍ಐಆರ್: ಸದ್ಯ ದೂರಿಗೆ ಸಂಬಂಧಿಸಿದಂತೆ 12 ಜನರ ಬಂಧನವಾಗಿದ್ದು, ಉಳಿದ 10 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿದೆ.

ಬಂಧಿತ ಹನ್ನೆರಡು ಜನರಲ್ಲಿ ಮೂವರು ಪೊಲೀಸ್ ಇಲಾಖೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದವರಿದ್ದಾರೆ. ಈ ಹಿಂದೆ ಇಲಾಖೆಗೆ ವಂಚಿಸಿ ರಕ್ತಚಂದನ ಅಕ್ರಮ ಸಾಗಣೆ ಆರೋಪದಡಿ ಹೊಸಕೋಟೆ ಪೊಲೀಸರಿಂದ ಬಂಧನವಾಗಿದ್ದ ಕಾನ್‍ಸ್ಟೆಬಲ್ ಮಮತೇಶ್ ಗೌಡ ಸೇರಿ ಮೂವರನ್ನು ಬಂಧಿಸಲಾಗಿದೆ. 

ಮತ್ತೊಂದೆಡೆ, ಪರೀಕ್ಷಾ ಅಕ್ರಮದ ತನಿಖೆಯಲ್ಲಿ ಅನುಮಾನಾಸ್ಪದ 22 ಅಭ್ಯರ್ಥಿಗಳ ಮೇಲೆ ಎಫ್‍ಐಆರ್ ದಾಖಲಾಗಿದೆ. ಕಲಬುರ್ಗಿ ಮಾತ್ರವಲ್ಲದೆ, ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ 172 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಪ್ರಕರಣ ಇಂದು ಸಿಐಡಿಗೆ ಅಧಿಕೃತವಾಗಿ ವರ್ಗಾವಣೆಯಾಗಲಿದ್ದು, ಬಂಧಿತರನ್ನು ಸಿಐಡಿ ವಶಕ್ಕೆ ಪಡೆಯಲಿದೆ. 

ಮುಖ್ಯೋಪಾಧ್ಯಾಯ ಶರಣು

ನೇಮಕಾತಿ ಪ್ರಕರಣದ ಮತ್ತೊಬ್ಬ ಆರೋಪಿ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸಿಐಡಿಗೆ ಶರಣಾಗಿದ್ದಾನೆ.

ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಲು ಸಹಕಾರ ನೀಡಿರುವ ಗಂಭೀರ ಆರೋಪ ಎದುರಿಸುತ್ತಿರುವ ಕಾಶಿನಾಥ್, 21 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು. ಇದೀಗ ಸ್ವತಃ ತಾವೇ ಕಲಬುರ್ಗಿಯ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.

ಬಟ್ಟೆ ತಂದ ಕುಟುಂಬ

ದಿವ್ಯಾ ಹಾಗರಗಿ ಕಾರು ಚಾಲಕನಾಗಿ ಸದ್ದಾಂ ಈಗಾಗಲೇ ಬಂಧನಕ್ಕೆ ಒಳಗಾಗಿದ್ದು, ಮಂಗಳವಾರ ರಮಝಾನ್ ಹಿನ್ನೆಲೆ ಆತನ ಕುಟುಂಬ ಹೊಸ ಬಟ್ಟೆ ತಂದು, ಸಿಐಡಿ ಕಚೇರಿ ಮುಂಭಾಗ ನಿಂತಿದ್ದ ದೃಶ್ಯ ಸೋಮವಾರ ಕಲಬುರ್ಗಿಯಲ್ಲಿ ಕಂಡಿತು.

ಅಭ್ಯರ್ಥಿಗಳ ಉಪವಾಸ ಸತ್ಯಾಗ್ರಹ

545 ಪಿಎಸ್ಸೈ ಹುದ್ದೆಗಳಲ್ಲಿ ನಡೆದ ನೇಮಕಾತಿ ಅಕ್ರಮ ಸಂಬಂಧ ರಾಜ್ಯ ಸರಕಾರದ ಮರು ಪರೀಕ್ಷೆಗೆ ಮುಂದಾಗಿರುವ ಕ್ರಮ ಖಂಡಿಸಿ ಹಲವು ಅಭ್ಯರ್ಥಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿರುವ ನೂರಾರು ಅಭ್ಯರ್ಥಿಗಳು, ಸೋಮವಾರದಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ರಾಜ್ಯ ಸರಕಾರ ಮರು ಪರೀಕ್ಷೆ ನಿರ್ಧಾರ ಕೈಬಿಡಬೇಕು. ಪ್ರಾಮಾಣಿಕ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News