×
Ad

ಕೆಂಪೇಗೌಡ ಪ್ರತಿಮೆಗೆ 4, 000 ಕೆಜಿ ತೂಕದ ಖಡ್ಗ!

Update: 2022-05-03 07:47 IST
Photo:twitter

ಬೆಂಗಳೂರು: ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ 108 ಅಡಿಯ ಪುತ್ಥಳಿಯನ್ನು  4,000 ಕೆಜಿ ತೂಕದ ಖಡ್ಗದಿಂದ ಅಲಂಕರಿಸಲು ಉದ್ದೇಶಿಸಿದ್ದು, ಬೃಹತ್ ಖಡ್ಗ ಸೋಮವಾರ ದಿಲ್ಲಿಯಿಂದ ಆಗಮಿಸಿದೆ.

ವಿಶೇಷ  ಟ್ರಕ್‍ನಲ್ಲಿ ಖಡ್ಗ ಈಗಾಗಲೇ ಬಂದಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಇದನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸ್ವಾಗತಿಸಿದರು.

ಕೆಂಪೇಗೌಡರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಸರಕಾರ 85 ಕೋಟಿ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 23 ಎಕರೆ ಪ್ರದೇಶದಲ್ಲಿ ಇದು ತಲೆ ಎತ್ತಲಿದ್ದು, 16ನೇ ಶತಮಾನದ ರಾಜನ ಗೌರವಾರ್ಥವಾಗಿ ಇಲ್ಲಿ ಪರಂಪರೆ ಪಾರ್ಕ್ ಕೂಡಾ ನಿರ್ಮಾಣವಾಗಲಿದೆ.

ಪುತ್ಥಳಿ ಈ ವರ್ಷ ಸಿದ್ಧವಾಗುವ ನಿರೀಕ್ಷೆ ಇದೆ. ಖ್ಯಾತ ಶಿಲ್ಪಿ ಹಾಗೂ ಪದ್ಮಭೂಷಣ ಪುರಸ್ಕೃತ ರಾಮ್ ವಂಜಿ ಸುತಾರ ಕೆಂಪೇಗೌಡ ಪುತ್ಥಳಿಯನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಸುತಾರ ಅವರು ಗುಜರಾತ್‍ನಲ್ಲಿ 597 ಅಡಿಯ ಏಕತೆಯ ಪ್ರತಿಮೆ ಹಾಗೂ  ವಿಧಾನಸೌಧ ಆವರಣದಲ್ಲಿ 27 ಅಡಿಯ ಮಹಾತ್ಮಗಾಂಧಿ ಪ್ರತಿಮೆಯನ್ನೂ ಸಿದ್ಧಪಡಿಸಿದ್ದರು.

"ಕೆಂಪೇಗೌಡರ ಖಡ್ಗ ಪರಾಕ್ರಮ ಹಾಗೂ  ನವಭಾರತದ ಸಂಕೇತ" ಎಂದು ಅಶ್ವತ್ಥನಾರಾಯಣ ನುಡಿದರು. ಕೆಂಪೇಗೌಡ ಸಾಂಸ್ಕೃತಿಕ ಐಕಾನ್ ಆಗಿದ್ದು, ಈ ಬೃಹತ್ ಪ್ರತಿಮೆ ಆಡಳಿತಾರೂಢ ಬಿಜೆಪಿಗೆ ಒಕ್ಕಲಿಗರ ಓಲೈಕೆಗೆ ಕೂಡಾ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News