ನಟ ಪುನೀತ್ ರಾಜ್‍ಕುಮಾರ್ ಗೆ ‘ಮರಣೊತ್ತರ ಬಸವಶ್ರೀ' ಪ್ರಶಸ್ತಿ ಪ್ರದಾನ

Update: 2022-05-03 12:31 GMT

ಚಿತ್ರದುರ್ಗ, ಮೇ 2: ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಟ ಮತ್ತು ಸಾಂಸ್ಕೃತಿಕ ರಾಯಭಾರಿ ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ 2021ನೆ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಐದುಲಕ್ಷ ರೂ. ನಗದು ಮತ್ತು ಸ್ಮರಣ ಫಲಕವನ್ನೊಳಗೊಂಡಿದೆ.

ಮಂಗಳವಾರ ಶ್ರೀ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಅಶ್ವಿನಿ ಅವರಿಗೆ ಬಸವಶ್ರೀ ಕೊಡುವುದರ ಮೂಲಕ ಅವರ ಕುಟುಂಬಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಪುನೀತ್ ಅವರು ನಟರಾಗಿ, ನಿರ್ಮಾಪಕರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಮಾನವೀಯ ಕಳಕಳಿಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಮೇಚ್ಚುಗೆ ವ್ಯಕ್ತಪಡಿಸಿದರು.

ಬಸವ ಸಂಸ್ಕೃತಿ ಸರ್ವರ ಸಂಸ್ಕೃತಿ. ಅದು ಲಿಂಗಾಯತರಿಗೆ ಮಾತ್ರ ಸಂಬಂಧಿಸಿದ ಸಂಸ್ಕøತಿಯಲ್ಲ. ಅದು ಎಲ್ಲರೊಳಗೊಳ್ಳುವ ಸಮಗ್ರ ಸಂಸ್ಕೃತಿ ಎಂದು ಹೇಳಿದರು. ಒಂದೊಂದು ಕಾಲದಲ್ಲಿ ಒಬ್ಬೊಬ್ಬರು ಮಿಂಚಿ ಹೋಗಿದ್ದಾರೆ. ಬಸವಣ್ಣನವರದು ವಿಶಾಲ ಹೃದಯ. ಬಸವಣ್ಣನವರು ಜಾತಿಯ ಉದ್ಧಾರಕರಲ್ಲ. ಅವರು ಮಾನವಕುಲದ ಉದ್ಧಾರಕರು. ಮಾದಾರಚೆನ್ನಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಸಿದ್ಧರಾಮೇಶ್ವರ ಮೊದಲಾದವರು ಕೆಳಸ್ತರದಿಂದ ಬಂದವರನ್ನು ಸಮಾನವಾಗಿ ಮೇಲೆತ್ತಿದರು.

ಜಾತಿರಹಿತ ಸಮಾಜ ರಚನೆಗೆ ಬಲಿದಾನ ಮಾಡಿದವರಲ್ಲಿ ಹರಳಯ್ಯ ಮತ್ತು ಮಧುವಯ್ಯರು, ಅವರ ಮಕ್ಕಳು ಪ್ರಾಣತ್ಯಾಗ ಮಾಡಿದರು. ಆದರ್ಶ ಜೀವನ ಬಯಸಿ ಸಕಲ ಸಾಮ್ರಾಜ್ಯವನ್ನು ತೊರೆದು ಸೇವೆಗಾಗಿ ಬಂದವರು ಮೋಳಿಗೆ ಮಾರಯ್ಯ ದಂಪತಿಗಳು. ಮಾನವ ಹಕ್ಕುಗಳಿಗಾಗಿ ಮನೆಬಿಟ್ಟು ಬಂದ ಧೀರ ಶರಣರೆಂದರೆ ಬಸವಣ್ಣನವರು. ತ್ಯಾಗದ ಮೇಲಿನ ಬದುಕು ಸುಭದ್ರ. ಭೋಗದ ಮೇಲಿನ ಬದುಕು ಅಭದ್ರ ಎಂದು ನುಡಿದರು.

ಹಿರಿಯ ಸಾಹಿತಿ ನಾಟಕಕಾರ ಡಾ.ರಾಜಪ್ಪ ದಳವಾಯಿ ಮಾತನಾಡಿ, ಈ ದೇಶ ಕಂಡ ಮಹಾನ್ ಕಲಾವಿದ. ಹುಟ್ಟತ್ತಲೇ ಕಲಾವಿದರಾಗಿ ಅಭಿನಯಿಸಿ ಜನಮಾನಸವನ್ನು ಆವರಿಸಿಕಂಡವರು ಪುನೀತ್. ನಾಡಿನ ಮಠ ಪರಂಪರೆಯಲ್ಲಿ ಮುರುಘಾ ಮಠದ್ದು ದೊಡ್ಡ ಕೊಡುಗೆ. ಹಾಗೆಯೇ ಡಾ.ರಾಜ್ ಕುಟುಂಬವು ಚಲನಚಿತ್ರ ರಂಗಕ್ಕೆ ದೊಡ್ಡ ಕೊಡುಗೆಯಾಗಿದೆ. ನಮ್ಮೆಲ್ಲರ ಆಕಾಶ ಪುನೀತ್. ಅಭಿಮಾನಿಗಳೇ ನನ್ನ ಕಾಲದ ದೇವರು ಎಂದವರು ಪುನೀತ್. ಈ ನಾಡು ಅಭಿಮಾನ ಶೂನ್ಯವಲ್ಲ. ಇನ್ನೊಬ್ಬರ ಕೂಡಿಸಿ ಬದುಕಿದ ಕುಟುಂಬ ಡಾ. ರಾಜ್ ಕುಟುಂಬ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಅದೆಷ್ಟು ಶಕ್ತಿ ಇದೆ. ಹುಟ್ಟು ಮತ್ತು ಸಾವಿನ ಮಧ್ಯೆ ಅವರು ಸಾಧಿಸಿದ ಸಾಧನೆ ದೊಡ್ಡದು. ಪುನೀತ್ ಅವರ ನಟನೆ ಅಚ್ಚಳಿಯದೆ ನಿಂತಿದೆ. ಇಂದು ಬಸವಶ್ರೀ ಪ್ರಶಸ್ತಿಗೆ ದೊಡ್ಡ ಗೌರವ. ಈ ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದು ಹೇಳಿದರು.

ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ. ಸಿಇಓ ಡಾ.ನಂದಿನಿದೇವಿ, ಮಂಗಳಾ ರಾಘವೇಂದ್ರ ರಾಜಕುಮಾರ್, ಚಿತ್ಯೋದ್ಯಮಿ ಚಿನ್ನೇಗೌಡರು, ಪಟೇಲ್ ಶಿವಕುಮಾರ್, ಎಸ್ಪಿ ಪರುಶುರಾಂ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ವಾಸು ವೇದಿಕೆಯಲ್ಲಿದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಸ್ವಾಗತಿಸಿದರು. ಸುರೇಖಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News