ಪಿಎಸ್ಸೈ ನೇಮಕಾತಿ ಪ್ರಕರಣ: ಮತ್ತೋರ್ವ ಪೊಲೀಸ್ ಅಧಿಕಾರಿ ವರ್ಗಾವಣೆ
ಬೆಂಗಳೂರು, ಮೇ 4: ಪಿಎಸ್ಸೈ ನೇಮಕಾತಿ ಪ್ರಕರಣ ಸಂಬಂಧ ಸಿಐಡಿ ತನಿಖೆ ಚುರುಕುಗೊಳಿಸಿರುವ ನಡುವೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿ ಶಾಂತರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ.
ಸದ್ಯ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಯಾವುದೇ ಪಕ್ಷ ಅಧಿಕಾರಿದಲ್ಲಿದ್ದರೂ ಶಾಂತರಾಜು ಮಾತ್ರ ನೇಮಕಾತಿ ವಿಭಾಗದಲ್ಲೇ ಠಿಕಾಣಿ ಹೂಡಿದ್ದರು. ಯಾವುದೇ ವಿಭಾಗಕ್ಕೆ ಎತ್ತಂಗಡಿ ಮಾಡಿದ್ದರೂ ಮತ್ತೆ ಮತ್ತೆ ನೇಮಕಾತಿ ವಿಭಾಗಕ್ಕೆ ವಾಪಾಸ್ ಆಗುತ್ತಿದ್ದರು ಎನ್ನಲಾಗಿದೆ.
ಆದರೆ, ಈ ಹಿಂದೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅವಧಿಯಲ್ಲಿ ಶಾಂತರಾಜು ಒಮ್ಮೆ ಎತ್ತಂಗಡಿ ಆಗಿದ್ದರು. ಈ ವೇಳೆ ಅವರನ್ನು ಐಎಸ್‍ಡಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಮತ್ತೆ ನೇಮಕಾತಿ ವಿಭಾಗಕ್ಕೆ ವಾಪಾಸ್ಸಾಗಿದ್ದರು.
ಕೆಲ ಸಾಕ್ಷ್ಯಾಧಾರದ ಹಿನ್ನಲೆ ಸಿಐಡಿ ಅಧಿಕಾರಿಗಳು ಡಿವೈಎಸ್ಪಿ ಶಾಂತರಾಜು ವಿಚಾರಣೆ ನಡೆಸಲಿದ್ದಾರೆ. ಪ್ರಮುಖವಾಗಿ ಓಎಂಆರ್ ಪ್ರತಿ ತಿದ್ದುವ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.