ಹಾಸನ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಮೃತ್ಯು
ಹಾಸನ: ನಗರದ ಎಂ.ಜಿ. ರಸ್ತೆಯ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ.
ಮೃತ ಯೋಧರನ್ನು ಸಂಜಯ್ ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ನಗರದ ಎಂ.ಜಿ. ರಸ್ತೆಯ ಡಿವೈಡರ್ ಗೆ ದ್ವೀಚಕ್ರ ವಾಹನ ಹೊಡೆದ ಪರಿಣಾಮ ಸಂಜಯ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ ಮೃತ ದೇಹವನ್ನು ಹಾಸನದ ವಾಸ ಸ್ಥಳ ದಾಸರಕೊಪ್ಪಲಿಗೆ ತರಲಾಯಿತು. ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ನಲ್ಲಿ ಕರ್ತವ್ಯದಲ್ಲಿದ್ದ ಸಂಜಯ್ ದೇಶ ಸೇವೆಯ ಬಗ್ಗೆ ಹೆಚ್ಚು ಕಾಳಜಿ ಹೊಂದಿ ಉತ್ತಮ ಸೇವೆ ಸಲ್ಲಿಸಿ, ಈಗ ನಾಯಕ್ ಆಗಿ ಬಡ್ತಿ ಪಡೆದಿದ್ದರು.
ಇತ್ತೀಚೆಗೆ ರಜೆಯ ಮೇಲೆ ಊರಿಗೆ ಬಂದಿದ್ದ ಅವರು, ಹಾಸನದ ದಾಸರಕೊಪ್ಪಲಿನಲ್ಲಿ ನೆಲೆಸಿದ್ದರು. ಘಟನೆಯಿಂದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.