×
Ad

ಮೋದಿ, ಮಾಧ್ಯಮಗಳ ಮೈಕು ಕಂಡರೆ ಏಕೆ-47 ಗನ್ ಕಂಡಂತೆ ಹೆದರಿ ಓಡುವುದೇಕೆ: ಕಾಂಗ್ರೆಸ್ ಪ್ರಶ್ನೆ

Update: 2022-05-04 19:11 IST

ಬೆಂಗಳೂರು, ಮೇ 4: ‘ಪ್ರಧಾನಿ ಮೋದಿಯವರು ಮಾಧ್ಯಮಗಳ ಮೈಕು ಕಂಡರೆ ಏಕೆ-47 ಗನ್ ಕಂಡಂತೆ ಹೆದರಿ ಓಡುವುದೇಕೆ? ಗಂಗೆಯಲ್ಲಿ ಕೋವಿಡ್ ಶವ ತೇಲಿದಾಗ, ಚೀನಾ 20 ಯೋಧರ ಹತ್ಯೆ ಮಾಡಿದಾಗ, ಪುಲ್ವಾಮ ದಾಳಿಯಲ್ಲಿ 40 ಯೋಧರು ಮಡಿದಾಗ ಬಾರದ ‘ಓಹ್ ಮೈ ಗಾಡ್' ಉದ್ಘಾರ ಮಾಧ್ಯಮಗಳ ಮೈಕ್ ಎದುರಾದಾಗ ಬರುತ್ತದೆ ಎಂದರೆ ಅದೆಷ್ಟು ಗಾಭರಿಯಾಗಿರಬಹುದು!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶೇ.40ರಷ್ಟು ಕಮಿಷನ್ ಬಿಜೆಪಿಯ ಹಗರಣಗಳ ಸಾಲಿಗೆ ಮತ್ತೊಂದು ಅಕ್ರಮ ಸೇರ್ಪಡೆಯಾಗಿದೆ. ರಮೇಶ್ ಜಾರಕಿಹೊಳಿಯವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಹೆಸರಲ್ಲಿ ನಡೆಯುತ್ತಿರುವ 600 ಕೋಟಿ ರೂ.ವಂಚನೆಗೆ ಇಡೀ ಸರಕಾರವೇ ಬೆಂಬಲವಾಗಿ ನಿಂತಿದೆ. ಅವರ ಸಾಲವನ್ನು ಎನ್‍ಪಿಎ ಎಂದು ಪರಿಗಣಿಸುವಲ್ಲಿ ರಾಜ್ಯ ಸರಕಾರ ಅಷ್ಟೇ ಅಲ್ಲ ಕೇಂದ್ರದ ಸಹಭಾಗಿತ್ವವೂ ಇದೆ' ಎಂದು ಟೀಕಿಸಿದೆ.

‘ಕೇಂದ್ರ ಗೃಹ ಸಚಿವರ ಭೇಟಿಯಿಂದ ರಾಜ್ಯಕ್ಕೆ ಸಿಕ್ಕ ಫಲವೇನು? ತೆರಿಗೆ ಬಾಕಿ ಕೊಡುವ ಬಗ್ಗೆ ಏನಾದರೂ ಹೇಳಿದರೆ? ಬಸವರಾಜ ಬೊಮ್ಮಾಯಿ ಅವರು ಕೇಳಿದರೆ? ಪಿಎಸ್ಸೈ ಪರೀಕ್ಷೆ, ಶೇ.40ರಷ್ಟು ಕಮಿಷನ್, ಬಿಟ್ ಕಾಯಿನ್ ಹಗರಣಗಳ ತನಿಖೆಯ ಬಗ್ಗೆ ಚರ್ಚಿಸಿದರೇ? ಬಾಕಿ ಉಳಿದ ನೆರೆ ಪರಿಹಾರ ಕೊಟ್ಟು ಹೋದರೇ? ನೀರಾವರಿ ಯೋಜನೆಗಳ ಅಡೆತಡೆಗಳನ್ನು ನಿವಾರಿಸಿದರೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಈ ಬಿಜೆಪಿ ಶೇ.40 ಕಮಿಷನ್ ಸರಕಾರಕ್ಕೆ ಜನರನ್ನು ಲೂಟಿ ಮಾಡಲು, ಎಲ್ಲ್ಲ ರೀತಿಯ ಅನ್ಯ ಮಾರ್ಗವನ್ನು ಹಿಡಿಯುತ್ತದೆ. ಮೂಲಸೌಕರ್ಯ ನೀಡುವುದು ಸರಕಾರದ ಆದ್ಯ ಕರ್ತವ್ಯ ಆದರೂ ಶುಲ್ಕ ನಿಗದಿ ಮಾಡಿ ಕ್ರೀಡಾಪಟುಗಳಲ್ಲಿ ಕ್ರೀಡಾ ಆಸಕ್ತಿಯನ್ನೇ ಕಡಿಮೆ ಮಾಡುವ ಮೂಲಕ ಕೋಮುಗಲಭೆಗೆ ಸೆಳೆಯುವ ಪಯತ್ನವೇ? ಅಥವಾ ಸರಕಾರದ ಖಜಾನೆ ಖಾಲಿಯಾಗಿದೆಯೇ?' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಆಹ್ವಾನವಿಲ್ಲದೆ ಬಿರಿಯಾನಿ ತಿನ್ನಲು ಪಾಕ್‍ಗೆ ಹೋಗಿಲ್ಲ: ‘ರಾಹುಲ್ ಗಾಂಧಿಯವರು ಆಹ್ವಾನದ ಮೇರೆಗೆ ಸ್ನೇಹಿತರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರೇ ಹೊರತು ಆಹ್ವಾನವಿಲ್ಲದಿದ್ದರೂ ಪಾಕಿಸ್ತಾನದ ಬಿರಿಯಾನಿ ತಿನ್ನಲು ಹೋಗಿರಲಿಲ್ಲ! ಪುಲ್ವಾಮ ದಾಳಿಯ ಸಂಗತಿ ತಿಳಿದರೂ ನಿರ್ಲಕ್ಷಿಸಿ ಶೂಟಿಂಗ್‍ನಲ್ಲಿ ನಿರತರಾಗಿದ್ದ ತಮ್ಮ ನಾಯಕನಿಗೆ ಬಿಜೆಪಿಗರು ಮೊದಲು ಬುದ್ಧಿ ಹೇಳಿಕೊಳ್ಳಲಿ' ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

‘ರಾಹುಲ್ ಗಾಂಧಿಯವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಜಗತ್ತಿನ ಅತಿದೊಡ್ಡ ಪ್ರಮಾದ ಎನ್ನುತ್ತಿರುವ ಬಿಜೆಪಿ ಉತ್ತರಿಸಲಿ, ಬಿಜೆಪಿ ನಾಯಕ ಪ್ರಕಾಶ್ ಜಾವ್ಡೇಕರ್ ಅವರು ಇದೇನು ಗೋಮೂತ್ರ ಪ್ರೋಕ್ಷಣೆ ಮಾಡುತ್ತಿರುವುದೇ ಅಥವಾ ಪವಿತ್ರ ಗಂಗಾಜಲವನ್ನು ಬಾಟಲಿಯಲ್ಲಿ ತುಂಬಿಕೊಂಡು ಸಿಂಪಡಿಸುತ್ತಿರುವುದೇ?!'(ಶಾಂಪೆನ್ ಬಾಟಲಿ ಹಿಡಿದ ಪ್ರಕಾಶ್ ಜಾವ್ಡೇಕರ್ ಫೋಟೋದೊಂದಿಗೆ ಟ್ವೀಟ್)

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News