×
Ad

ಭ್ರಷ್ಟಾಚಾರದ ಸಸಿಗೆ ನೀರು, ಗೊಬ್ಬರ ಹಾಕಿದ್ದು ಕಾಂಗ್ರೆಸ್: ಶಾಸಕ ಪಿ.ರಾಜೀವ್

Update: 2022-05-04 20:46 IST

ಬೆಂಗಳೂರು, ಮೇ 4: ‘ತಾನು ಹೊಲಸು ತಿಂದು ಬೇರೆಯವರ ಮುಖಕ್ಕೆ ಒರೆಸುವ ಸಂಪ್ರದಾಯ ಕಾಂಗ್ರೆಸ್ಸಿಗರದು' ಎಂದು ಬಿಜೆಪಿ ವಕ್ತಾರರು ಮತ್ತು ಶಾಸಕ ಪಿ.ರಾಜೀವ್ ಆರೋಪಿಸಿದ್ದಾರೆ.

ಬುಧವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಅರ್ಕಾವತಿ ಲೇಔಟ್ ಡಿನೋಟಿಫಿಕೇಶನ್ ಹಗರಣದ ದಾಖಲೆಗಳನ್ನು ಮಾಯ ಮಾಡಿ ಕರ್ನಾಟಕದ ಜನತೆಗೆ ಮಾಯಾ ಬಝಾರ್ ದರ್ಶನ ಮಾಡಿದ ಕಾಂಗ್ರೆಸ್‍ರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ' ಎಂದು ತಿರುಗೇಟು ನೀಡಿದರು. 

‘ಸಿದ್ದರಾಮಯ್ಯನವರು ತಪ್ಪು ಮಾಹಿತಿ, ತಪ್ಪು ಅಂಕಿಅಂಶಗಳ ಮೂಲಕ ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸಿಗರ ಬುದ್ಧಿಮಾತಿನಿಂದ ನಾವೇನೂ ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಸರಕಾರ ಇದ್ದಾಗ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಲೋಕೇಶ್, ಸ್ನೇಹಿತ ಲಕ್ಷ್ಮೀಕಾಂತ್ ಸೇರಿಕೊಂಡು ಸಾರ್ವಜನಿಕರಿಂದ 2013ರಿಂದ 2017ರವರೆಗೆ ಡಿವೈಎಸ್ಪಿ ಮತ್ತಿತರ ಸರಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ 18 ಕೋಟಿ ರೂ.ವಸೂಲಿ ಮಾಡಿದ ಪ್ರಕರಣ ಇದಾಗಿದೆ' ಎಂದು ಟೀಕಿಸಿದರು.

‘ಪ್ರಿಯಾಂಕ್ ಖರ್ಗೆ ಪ್ರಚಾರದ ಗೀಳನ್ನು ಅಂಟಿಸಿಕೊಂಡ ವ್ಯಕ್ತಿ. ಅವರಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಅವರು ದಂಡಪ್ರಕ್ರಿಯಾ ಸಂಹಿತೆಯನ್ನು ಓದಿ ತಿಳಿದುಕೊಳ್ಳಬೇಕು. ಅಪರಾಧದ ಮಾಹಿತಿ ಇದ್ದರೆ ಅದನ್ನು ತನಿಖಾ ಸಂಸ್ಥೆಗೆ ಕೊಡುವುದು ಅವರ ಜವಾಬ್ದಾರಿ ಆಗಿದೆ. ಆದರೆ, ಪ್ರಿಯಾಂಕ್ ಅವರು ಮಾಹಿತಿ ಕೊಡದೆ ಜವಾಬ್ದಾರಿಯುತ ನಾಗರಿಕ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ' ಎಂದು ರಾಜೀವ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News