2021ರಲ್ಲಿ ಹಸಿವಿನ ಸಮಸ್ಯೆ ಹೆಚ್ಚಳ: ಆಹಾರ ಅಭದ್ರತೆಯ ಸಮಸ್ಯೆಯ ವ್ಯಾಪ್ತಿಗೆ ಹೆಚ್ಚುವರಿ 40 ಮಿ. ಜನತೆ ಸೇರ್ಪಡೆ

Update: 2022-05-04 17:01 GMT
PTI

ಪ್ಯಾರಿಸ್, ಮೇ 4: ಹವಾಮಾನ ಬದಲಾವಣೆ , ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ ವರ್ಷ ಹಸಿವಿನ ಸಮಸ್ಯೆಯ ಬಿಕ್ಕಟ್ಟಿಗೆ ಹೆಚ್ಚುವರಿಯಾಗಿ 40 ಮಿಲಿಯನ್ ಜನ ಸೇರ್ಪಡೆಗೊಂಡಿದ್ದು ಹಸಿವಿನ ಸಂಕಟಕ್ಕೆ ಸಿಲುಕಿದವರ ಸಂಖ್ಯೆ 193 ಮಿಲಿಯನ್ ಗೆ ತಲುಪಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ) ಬುಧವಾರ ವರದಿ ಮಾಡಿದೆ.

 ಉಕ್ರೇನ್‌ನಲ್ಲಿ  ರಶ್ಯ ನಡೆಸುತ್ತಿರುವ ಯುದ್ಧವು ಬರಗಾಲಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿರುವ ಮಧ್ಯೆಯೇ, 2021ರಲ್ಲಿ ಸುಮಾರು 40 ಮಿಲಿಯನ್ ಹೆಚ್ಚುವರಿ ಮಂದಿಗೆ ಆಹಾರದ ಅಭದ್ರತೆ ಸಮಸ್ಯೆ ತೀವ್ರವಾಗಿ ಕಾಡಬಹುದು ಎಂದು ಎಫ್ಎಒ ಎಚ್ಚರಿಸಿದೆ.ಆಹಾರದ ಬಿಕ್ಕಟ್ಟು ತೀವ್ರಗೊಂಡಿರುವ 53 ದೇಶಗಳಲ್ಲಿ ಕಾಂಗೊ ಗಣರಾಜ್ಯ, ಇಥಿಯೋಪಿಯಾ, ಯೆಮನ್ ಮತ್ತು ಅಫ್ಗಾನ್‌ನಲ್ಲಿ ಸಮಸ್ಯೆ ಹೆಚ್ಚಿದೆ. ಒಬ್ಬ ವ್ಯಕ್ತಿ ಸಾಕಷ್ಟು ಆಹಾರ ಸೇವಿಸಲು ಅಸಮರ್ಥನಾಗುವ ಮೂಲಕ ಜೀವ ಅಥವಾ ಜೀವನೋಪಾಯವನ್ನು ತಕ್ಷಣದ ಅಪಾಯಕ್ಕೆ ಒಡ್ಡಿಕೊಳ್ಳುವ ಪರಿಸ್ಥಿತಿಯನ್ನು ತೀವ್ರವಾದ ಆಹಾರ ಅಭದ್ರತೆಯ ಪರಿಸ್ಥಿತಿ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸುತ್ತದೆ. ಈ ಹಸಿವಿನ ಪರಿಸ್ಥಿತಿ ಮುಂದಿನ ದಿನದಲ್ಲಿ ಕ್ಷಾಮಕ್ಕೆ ತಿರುಗುತ್ತದೆ ಮತ್ತು ವ್ಯಾಪಕ ಸಾವು ನೋವಿಗೆ ಕಾರಣವಾಗುತ್ತದೆ ಎಂದು ಎಫ್ಎಒ ಹೇಳಿದೆ. 2016ರಲ್ಲಿ ಎಫ್ಒಎ ಪ್ರಥಮ ವರದಿ ಪ್ರಕಟಿಸಿದಂದಿನಿಂದ ಪ್ರತೀ ವರ್ಷ ಹಸಿವಿನ ಸಮಸ್ಯೆಗೆ ಸಿಲುಕಿದವರ ಪ್ರಮಾಣ ಹೆಚ್ಚುತ್ತಾ ಸಾಗುತ್ತಿದೆ. ರಶ್ಯ ಮತ್ತು ಉಕ್ರೇನ್ ಗೋಧಿಯಿಂದ ಸೂರ್ಯಕಾಂತಿ ಎಣ್ಣೆ, ರಸಗೊಬ್ಬರದ ವರೆಗೆ ದೈನಂದಿನ ಅಗತ್ಯದ ಕೃಷಿ ಉತ್ಪನ್ನಗಳ ಪ್ರಮುಖ ರಫ್ತು ದೇಶಗಳಾಗಿದ್ದು , ಈ ಎರಡು ದೇಶಗಳ ನಡುವಿನ ಸಂಘರ್ಷ ಆಹಾರದ ದರವನ್ನು ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ಹೆಚ್ಚಿಸಿದೆ. ಜಾಗತಿಕ ಆಹಾರ ವ್ಯವಸ್ಥೆಯ ಅಂತರ್ಸಂಪರ್ಕಿತ ರಚನೆಯನ್ನು ಈ ಯುದ್ಧ ಎತ್ತಿತೋರಿಸಿದೆ. ಸೊಮಾಲಿಯಾ, ಕಾಂಗೊ ಗಣರಾಜ್ಯ, ಮಡಗಾಸ್ಕರ್ನಂತಹ ತೀವ್ರ ಆಹಾರದ ಸಮಸ್ಯೆ ಎದುರಾಗಿರುವ ಹೆಚ್ಚಿನ ದೇಶಗಳು ತಮ್ಮ ಬಹುತೇಕ ಗೋಧಿಯನ್ನು ರಶ್ಯ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿವೆ ಎಂದು ಎಫ್ಎಒ ವರದಿ ಮಾಡಿದೆ.

ಗ್ರಾಮೀಣ ಸಮುದಾಯವನ್ನು ಬೆಂಬಲಿಸಲು ಇನ್ನಷ್ಟು ಕಾರ್ಯ ಮಾಡದಿದ್ದರೆ, ಮುಂದಿನ ದಿನದಲ್ಲಿ ವಿನಾಶದ ಪ್ರಮಾಣ , ಹಸಿವಿನ ಸಮಸ್ಯೆ ಮತ್ತು ಜೀವನಾಧಾರದ ನಷ್ಟದ ಪ್ರಮಾಣ ಅತ್ಯಂತ ಭಯಾನಕವಾಗಿರಲಿದೆ. ಮುಂದೆ ವಿಪತ್ತು ಸಂಭವಿಸದಂತೆ ಈಗಲೇ ತುರ್ತು ಮಾನವೀಯ ನೆರವಿನ ಉಪಕ್ರಮ ಒದಗಿಸುವ ಅಗತ್ಯವಿದೆ ಎಂದು ವರದಿ ಪ್ರತಿಪಾದಿಸಿದೆ. ಅಪಾಯದ ದವಡೆಯಲ್ಲಿರುವ ಪ್ರದೇಶದಲ್ಲಿ ಸ್ಥಳೀಯ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸ್ಥಿರಗೊಳಿಸಲು 1.5 ಬಿಲಿಯನ್ ಡಾಲರ್ ಮೊತ್ತದ ಅಗತ್ಯವಿದೆ. ಈಗ ಸಮಯ ವ್ಯರ್ಥಮಾಡುವಂತಿಲ್ಲ ಎಂದು ಎಫ್ಎಒ ಹೇಳಿದೆ. 

ತ್ರಿವಳಿ ಆಘಾತ

2021ರಲ್ಲಿ ಹಸಿವಿನ ಸಮಸ್ಯೆ ಹೆಚ್ಚಳಕ್ಕೆ ಸಂಘರ್ಷ, ಹವಾಮಾನ ವೈಪರೀತ್ಯ ಮತ್ತು ಆರ್ಥಿಕ ಆಘಾತ ಎಂಬ ತ್ರಿವಳಿ ಪ್ರಹಾರಗಳು ಕಾರಣವಾಗಿವೆ ಎಂದು ವರದಿ ಹೇಳಿದೆ. ಈ ವರದಿಯಲ್ಲಿ ಉಕ್ರೇನ್‌ನಲ್ಲಿನ ಯುದ್ಧದ ಪರಿಣಾಮವನ್ನು ಪರಿಗಣಿಸಿಲ್ಲ. ಯುದ್ಧವು ಆರ್ಥಿಕ ಬಿಕ್ಕಟ್ಟಿನಲ್ಲಿರುವ ಮತ್ತು ಕ್ಷಾಮದ ದವಡೆಯಲ್ಲಿರುವ ದೇಶಗಳ ಅರ್ಥವ್ಯವಸ್ಥೆಯ ಮೇಲಾ ಅತ್ಯಂತ ಮಾರಕ ಪರಿಣಾಮ ಉಂಟು ಮಾಡುತ್ತದೆ. 2021ರಲ್ಲಿ ಸಂಘರ್ಷ ಮತ್ತು ಅಭದ್ರತೆಯು 24 ದೇಶಗಳಲ್ಲಿ ಹಸಿವಿನ ಸಮಸ್ಯೆ ತೀವ್ರಗೊಳ್ಳಲು ಕಾರಣವಾಗಿದ್ದು 139 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಕೋವಿಡ್‌ನಿಂದ ಹದಗೆಟ್ಟ ಅರ್ಥವ್ಯವಸ್ಥೆಯ ಆಘಾತವು 21 ದೇಶಗಳ 30.2 ಮಿಲಿಯನ್ ಜನರನ್ನು ಘಾಸಿಗೊಳಿಸಿದೆ. ಹವಾಮಾನ ವೈಪರೀತ್ಯ 8 ಆಫ್ರಿಕಾ ದೇಶಗಳ 23.5 ಮಿಲಿಯನ್ ಜನರಲ್ಲಿ ತೀವ್ರ ಆಹಾರದ ಅಭದ್ರತೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News