ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಆರೋಪ ಮಾಡುತ್ತಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-05-05 15:34 GMT

ಬೆಂಗಳೂರು, ಮೇ 5: ‘ಕಾಂಗ್ರೆಸ್ ಪಕ್ಷದವರು ರಾಜ್ಯದ ಬಿಜೆಪಿ ಸರಕಾರ ಮಾಡಿದ ಎಲ್ಲ ಉತ್ತಮ ಕಾರ್ಯಗಳನ್ನು ಮರೆಮಾಚಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೂರಿದ್ದಾರೆ.

ಗುರುವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರ ಅಪಪ್ರಚಾರದ ಹೊರತಾಗಿಯೂ ರಾಜ್ಯದಲ್ಲಿರುವ ದಲಿತರು, ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ, ಪಂಗಡದವರು ಬಿಜೆಪಿಯನ್ನು ಸ್ಪಷ್ಟವಾಗಿ ಬೆಂಬಲಿಸುತ್ತಿರುವುದು ನಮ್ಮ ಕಣ್ಣ ಮುಂದೆ ಕಂಡುಬರುತ್ತಿದೆ. ಇದರಿಂದ ಹತಾಶರಾಗಿ ಕಾಂಗ್ರೆಸ್‍ನವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

‘ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಆತಂಕ ಕಾಂಗ್ರೆಸ್‍ನವರ ಮನಸ್ಸಿನಲ್ಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ಬಾರಿ ಬಜೆಟ್‍ನಲ್ಲಿ ಎಸ್ಸಿ-ಎಸ್ಟಿ ವರ್ಗಕ್ಕೆ 28 ಸಾವಿರ ಕೋಟಿ ರೂ.ಮೀಸಲಿಟ್ಟಿದೆ. ಕ್ರಿಯಾಯೋಜನೆಯೂ ಸಿದ್ಧವಾಗುತ್ತಿದೆ. ಹಿಂ.ವರ್ಗದ ಎಲ್ಲ ಜಾತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ದೀನದಯಾಳ್‍ಜಿ ಅವರ ಹೆಸರಿನಲ್ಲಿ ಪ್ರಥಮ ಬಾರಿಗೆ ರಾಜ್ಯದ 5 ಕೇಂದ್ರೀಕೃತ ವಿದ್ಯಾಸಂಸ್ಥೆ ಇರುವ ಕಡೆ ಸಾವಿರ ಮಕ್ಕಳ ಹಾಸ್ಟೆಲ್ ಮಾಡುತ್ತಿರುವುದು ಅದ್ಭುತ ಕಲ್ಪನೆ ಎಂದು ಅವರು ತಿಳಿಸಿದರು.

‘ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಲೋಕಾಯುಕ್ತವನ್ನು ಬುಡಮೇಲು ಮಾಡಿ ಎಸಿಬಿಯನ್ನು ತಂದರು ಎಂದು ಆರೋಪಿಸಿದರಲ್ಲದೆ, ನಿಮ್ಮ ಅವಧಿಯಲ್ಲಿ ಆದ ಎಷ್ಟು ಅಕ್ರಮಗಳ ತನಿಖೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಸಮನ್ವಯದ ಕೊರತೆಯನ್ನು ಮರೆಮಾಚಲು ಬಿಜೆಪಿ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ' ಎಂದು ನುಡಿದರು.

‘ಕಾಂಗ್ರೆಸ್‍ನ ಎಲ್ಲ ಹೇಳಿಕೆಗಳು, ವಿಚಾರಗಳು ಕೇವಲ ರಾಜಕೀಯ ಬೂಟಾಟಿಕೆಗಾಗಿ ಹಾಗೂ ಜನರ ಭಾವನೆಗಳನ್ನು ಬೇರೆ ಕಡೆ ತಿರುಗಿಸುವ ಉದ್ದೇಶವನ್ನು ಹೊಂದಿವೆ. ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಮರೆಮಾಚಲು ಇಂಥ ಟೀಕೆ ಮಾಡುತ್ತಿದ್ದಾರೆ. ಸತ್ಯಕ್ಕೆ ಅಪಚಾರವಾಗುವ ಟೀಕೆ- ಆರೋಪ ನಿಲ್ಲಿಸಿ. ಪಿಎಸ್ಸೈ ನೇಮಕ ಪ್ರಕರಣದ ಸಂಬಂಧ ದೋಷಿಗಳು ಮತ್ತು ನಿರ್ದೋಷಿಗಳನ್ನು ತನಿಖಾ ಸಂಸ್ಥೆಗಳು ನಿರ್ಧರಿಸುತ್ತವೆ' ಎಂದು ವಿವರಿಸಿದರು.

ಸಲ್ಲದ ಆರೋಪ

‘ಕಾಂಗ್ರೆಸ್ ಪಕ್ಷದಲ್ಲಿ ಅಸ್ತಿತ್ವಕ್ಕಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅಶ್ವತ್ಥನಾರಾಯಣ ತೇಜೋವಧೆ ಮಾಡುವುದು ಸರಿಯಲ್ಲ. ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಡಬಾರದು ಎಂದಿದೆಯೇ? ದಾಖಲಾತಿ ಕೊಡಿ ಎಂದು ಕೇಳಿದ್ದಾರೆ. ತಪ್ಪೇನಿದೆ. ಪೆÇಲೀಸರು ಯಾರದೇ ಹಿಡಿತದಲ್ಲಿಲ್ಲ; ಅವರದೇ ಆದ ತನಿಖೆ ಮಾಡಲಿದ್ದಾರೆ'

-ಎಸ್.ಟಿ.ಸೋಮಶೇಖರ್ ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News