ಮೇ 13ಕ್ಕೆ ನೆಲಮಂಗಲ ಬಳಿ ಬೃಹತ್ ಜಲಧಾರೆ ಸಮಾವೇಶ: ಬಂಡೆಪ್ಪ ಕಾಶೆಂಪೂರ್

Update: 2022-05-05 16:04 GMT

ಬೆಂಗಳೂರು, ಮೇ 5: ಹನುಮ ಜಯಂತಿ ದಿನವಾದ ಎಪ್ರಿಲ್ 16ರಂದು ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು, ಇದೇ ಮೇ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಜೆಪಿ ಭವನದಲ್ಲಿ ಪಕ್ಷದ ಪ್ರಮುಖರ ಸಭೆ(ಕೋರ್ ಕಮಿಟಿ)ಯ ಬಳಿಕ ಮಾತನಾಡಿದ ಅವರು, ರಾಜ್ಯದ 184 ಕ್ಷೇತ್ರಗಳಲ್ಲಿ ಜಲಧಾರೆಯ 15 ಗಂಗಾರಥಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಆ ಮೂಲಕ ರಾಜ್ಯದ ಎಲ್ಲ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು. ಈ ಸಮಾವೇಶದಲ್ಲಿ 5ಲಕ್ಷಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ' ಎಂದರು.

‘ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕರೆ ಐದು ವರ್ಷಗಳಲ್ಲಿ ಜನತಾ ಸರಕಾರ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಆ ಸಮಾವೇಶದಲ್ಲಿ ಸಂಕಲ್ಪ ಮಾಡಲಾಗುವುದು. ಸಂಜೆ 4ಗಂಟೆಗೆ ಆರಂಭ ಆಗಲಿರುವ ಸಮಾವೇಶದಲ್ಲಿ ಮಾಜಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗಂಗಾ ಆರತಿ: ಸಮಾವೇಶದ ಕೊನೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಮೇಲೆ ಅತ್ಯಂತ ಸಂಪ್ರದಾಯಬದ್ಧವಾಗಿ ಗಂಗಾ ಆರತಿಯನ್ನು ನೆರವೇರಿಸಲಾಗುವುದು. ಈ ಕಾರ್ಯಕ್ರಮಕ್ಕೆ ವಾರಾಣಸಿಯಿಂದ ಪಂಡಿತರನ್ನು ಕರೆಸಲಾಗುವುದು. ಸಂಜೆಯ ಹೊತ್ತಿನಲ್ಲಿ ಆರತಿ ವಿಶೇಷವಾಗಿ ಮೂಡಿಬರಲಿದೆ. ಜಲಧಾರೆ ಸಮಾವೇಶವನ್ನು ಯಶಸ್ವಿಯಾಗಿ ಮಾಡುವ ಉದ್ದೇಶದಿಂದ ಐದು ಉಪ ಸಮಿತಿಗಳನ್ನು ರಚನೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ವಾಹನ ನಿಲುಗಡೆ, ಊಟ, ಮಾಧ್ಯಮ, ಸಭಾಂಗಣ ಹಾಗೂ ಗಂಗಾ ಆರತಿ ವ್ಯವಸ್ಥೆಗಾಗಿ ಈ ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳ ಮುಖ್ಯಸ್ಥರು ಯಾರು ಎಂಬುದನ್ನು ಒಂದೆರಡು ದಿನದಲ್ಲಿ ತಿಳಿಸಲಾಗುವುದು ಎಂದ ಅವರು, ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಲೋಣಿ ಅವರನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News