ಶ್ರೀಲಂಕಾಗೆ ಡಿಎಂಕೆ ಸಂಸದರಿಂದ ಒಂದು ತಿಂಗಳ ವೇತನ ದೇಣಿಗೆ

Update: 2022-05-05 17:29 GMT

ಚೆನ್ನೈ,ಮೇ 5: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಗೆ ಕಳುಹಿಸಲಾಗಿರುವ ಮಾನವೀಯ ಪರಿಹಾರ ಸಾಮಾಗ್ರಿಗಳಿಗೆ ಉದಾರವಾಗಿ ದೇಣಿಗೆಯನ್ನು ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯದ ಜನತೆಯನ್ನು ಆಗ್ರಹಿಸಿದ್ದಾರೆ.ತನ್ನ ಸಂಸದರು , ಶ್ರೀಲಂಕಾ ಕುರಿತ ಮುಖ್ಯಮಂತ್ರಿಯವರ ನಿಧಿಗೆ ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಲಿದ್ದಾರೆಂದು ಆಡಳಿತಾರೂಢ ಡಿಎಂಕೆ ಪಕ್ಷ ಘೋಷಿಸಿದೆ.

  ಶ್ರೀಲಂಕಾಗೆ ನೆರವಿನ ರೂಪದಲ್ಲಿ ಅಕ್ಕಿ ಹಾಗೂ ಅವಶ್ಯಕ ಔಷಧಿ ವಸ್ತುಗಳನ್ನು ಪೂರೈಕೆ ಮಾಡಲು ಕೇಂದ್ರದ ಅನುಮತಿ ಕೋರುವ ನಿರ್ಣಯವನ್ನು ತಮಿಳು ನಾಡು ವಿಧಾನಸಬೆ ಅಂಗೀಕರಿಸಿದ್ದು, ಅದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅನುಮೋದನೆ ನೀಡಿದ್ದರು.

    ತಮಿಳುನಾಡು ಸರಕಾರದ ಈ ಸಹಾಯವು, ಭಾರತ ಸರಕಾರವು ಶ್ರೀಲಂಕಾಕ್ಕೆ ಒದಗಿಸುತ್ತಿರುವ ನೆರವಿಗೆ ಪೂರಕವಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ. ಎಲ್ಲರನ್ನೂ ಒಳಪಡಿಸಿಕೊಂಡು ನೆರವು ಸಾಮಾಗ್ರಿಗಳನ್ನು ವಿತರಿಸುವುದಾಗಿ ಶ್ರೀಲಂಕಾ ಸರಕಾರ ಮಾಹಿತಿ ನೀಡಿರುವುದಾಗಿ ಅವರು ಹೇಳಿದ್ದಾರೆ.

  ಪರಿಹಾರ ಸಾಮಾಗ್ರಿಗಳನ್ನು ಪೂರೈಕೆಗೆ ಕೇಂದ್ರ ಜೊತೆ ಸಮನ್ವಯವನ್ನು ಸಾಧಿಸುವಂತೆ ತಮಿಳುನಾಡು ಸರಕಾರವು , ರಾಜ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಬಹುದಾಗಿದೆಯೆಂದು ಜೈಶಂಕರ್ ಹೇಳಿದ್ದಾರೆ.

 ತೀವ್ರವಾದ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿರುವ ಆಹಾರ, ಔಷಧಿ ಹಾಗೂ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು, ನೆರವಿಗಾಗಿ ನೆರೆಹೊರೆಯ ರಾಷ್ಟ್ರಗಳ ಮೊರೆ ಹೋಗುತ್ತಿದೆ. ಕೋವಿಡ್ 19 ಹಾವಳಿಯ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸ್ತಬ್ಧಗೊಂಡಿದ್ದರಿಂದ ದೇಶದ ವಿದೇಶಿ ವಿನಿಮಯದಲ್ಲಿ ಅಪಾರ ಕೊರತೆಯುಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News