ಮೇ 7ಕ್ಕೆ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ: ಸಚಿವ ಪ್ರಭು ಚೌಹಾಣ್

Update: 2022-05-05 18:14 GMT

ಬೆಂಗಳೂರು, ಮೇ 5: ‘ಸಂಚಾರಿ ಪಶು ಚಿಕಿತ್ಸಾಲಯ(ಆಂಬ್ಯುಲೆನ್ಸ್) ಲೋಕಾರ್ಪಣೆ ಕಾರ್ಯಕ್ರಮ ಮೇ 7ಕ್ಕೆ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದ ಆವರಣದಲ್ಲಿ ಕೇಂದ್ರ ಪಶು ಸಂಗೋಪನೆ ಸಚಿವ ಪರುಷೋತ್ತಮ್ ರೂಪಾಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಯೋಜನೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ' ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾನುವಾರುಗಳ ಆರೋಗ್ಯ ಸೇವೆಗಾಗಿ 275 ಆಂಬ್ಯುಲೆನ್ಸ್‍ಗಳ ಪೈಕಿ 70 ಅಂಬ್ಯುಲೆನ್ಸ್‍ಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಸೇರಿದಂತೆ 290ಲಕ್ಷ ಜಾನುವಾರುಗಳಿದ್ದು, ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಚಿಕಿತ್ಸಾ ವಾಹನದಂತೆ 275 ವಾಹನ ಒದಗಿಸಲಾಗುತ್ತಿದೆ' ಎಂದು ವಿವರಿಸಿದರು.

‘ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿಗಾ ವ್ಯವಸ್ಥೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗಿದ್ದು, ರೈತರಿಂದ ಟ್ರೋಲ್ ಫ್ರಿ ಸಂಖ್ಯೆ 1962ಕ್ಕೆ ಕರೆ ಬಂದ ತಕ್ಷಣ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುವುದು. ಪ್ರತಿ ಚಿಕಿತ್ಸಾ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕ ಮತ್ತು ವಾಹನ ಚಾಲಕ ಕಂ ದರ್ಜೆ ನೌಕಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜಾನುವಾರುಗಳ ಸಂರಕ್ಷಣೆ, ಪಾಲನೆ ಮತ್ತು ಆರೋಗ್ಯ ರಕ್ಷಣೆಗಾಗಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಾಹನಗಳ ಮೂಲಕ ಪಶು ಸಂಜೀವಿನಿ ಯೋಜನೆ ಜಾರಿಗೆ ತರಲಾಗಿತ್ತು. ಇದರ ಮುಂದುವರೆದ ಭಾಗವೇ ಸಂಚಾರಿ ಪಶು ಚಿಕಿತ್ಸಾ ವಾಹನವಾಗಿದೆ ಎಂದು ಅವರು ತಿಳಿಸಿದರು.

‘ನಾನು ಪಶು ಸಂಗೋಪನೆ ಇಲಾಖೆ ಸಚಿವನಾದ ನಂತರದಲ್ಲಿ ಸರಕಾರದ ವತಿಯಿಂದ 15 ಪಶು ಚಿಕಿತ್ಸಾ ವಾಹನಗಳನ್ನು ಪಶು ಸಂಜೀವಿನಿ ಹೆಸರಲ್ಲಿ ಲೋಕಾರ್ಪಣೆ ಮಾಡಿದ್ದು, ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ಗಮನಿಸಿದ ಕೇಂದ್ರ ಸರಕಾರವು ಪಶು ಸಂಜೀವಿನಿ ಕಾರ್ಯಕ್ರಮವನ್ನು ಪ್ರಶಂಸಿಸಿ ರಾಜ್ಯಕ್ಕೆ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಒದಗಿಸಿದ್ದು, ದೇಶದಲ್ಲಿಯೇ ಮೊದಲು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಪೈಕಿ 70 ವಾಹನಗಳನ್ನು ನಾಳೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಇಲಾಖೆಯನ್ನು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಿದ್ದು, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪಶು ಸಂಜೀವಿನಿ ಆಂಬ್ಯುಲೆನ್ಸ್, ಗೋಹತ್ಯೆ ನಿಷೇಧ ಕಾಯ್ದೆ ಅಧ್ಯಯನಕ್ಕಾಗಿ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ತೆರಳಿ ಅಧ್ಯಯನ ಮಾಡಿ ಬಂದ ನಂತರವೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಷ್ಟ್ರದ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ(ವಾರ್ ರೂಮ್) ಸ್ಥಾಪನೆ, ಜಿಲ್ಲೆಗೊಂದು ಸರಕಾರಿ ಗೋಶಾಲೆ ನಿರ್ಮಾಣ, ಪಶುಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ಲಸಿಕಾ ಅಭಿಯಾನ,  ಪಶುವೈದ್ಯರು ಮತ್ತು ಸಿಬ್ಬಂದಿಗಳ ನೇಮಕಾತಿ, ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನೆ-ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ಆಡಳಿತ ಯಂತ್ರ ಸುಗಮವಾಗಿ ಸಾಗುವಂತೆ ಮಾಡಿದ್ದೇನೆ ಎಂದು ತಿಳಿಸಿದರು.

‘ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ, ಆಕಸ್ಮಿಕ ಮರಣ ಹೊಂದಿದ ಕುರಿ ಮತ್ತು ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರಧನ ವಿತರಿಸಲಾಗಿದೆ. ಪ್ರಸಕ್ತ ಆಯವ್ಯಯದಲ್ಲಿ 70 ಹೊಸ ಗೋಶಾಲೆ, ಗವ್ಯ ಉತ್ಪನ್ನ ಸಂಶೋಧನೆ ಮತ್ತು ಮಾರಾಟಕ್ಕಾಗಿ ಗೋಮಾತಾ ಸಹಕಾರಿ ಸಂಘ ಸ್ಥಾಪನೆ, ಆತ್ಮನಿರ್ಭರ ಗೋಶಾಲೆ, ಪುಣ್ಯಕೋಟಿ ದತ್ತು ಯೋಜನೆ, ಹಾಲು ಉತ್ಪಾದಕರನ್ನು ಪೆÇ್ರೀತ್ಸಾಹಿಸಲು ಸಮೃದ್ಧಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ಗೋರಕ್ಷಕರ ಮತ್ತು ಗೋಪಾಲಕರ ಸೇವೆಗೆ ಸದಾ ಸರಕಾರ ಸಿದ್ಧವಿದೆ'

-ಪ್ರಭು ಚೌಹಾಣ್ ಪಶುಸಂಗೋಪನಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News