ಮರಾಠ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ನೀಡಬೇಕು: ರಮೇಶ್ ಜಾರಕಿಹೊಳಿ

Update: 2022-05-05 18:15 GMT

ಬೆಳಗಾವಿ, ಮೇ 5: ‘ರಾಜ್ಯದಲ್ಲಿನ ಮರಾಠ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕಿದೆ. ಈ ಸಂಬಂಧ ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದು, ಶೀಘ್ರದಲ್ಲೆ ಶುಭ ಸುದ್ದಿ ಬರುವ ಸಾಧ್ಯತೆಗಳಿವೆ' ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನ ಕೊಡುವುದು ಅಥವಾ ಬಿಡುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು. ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನಗೆ ಮಂತ್ರಿ ಸ್ಥಾನವೂ ಬೇಡ ಎಂದಿದ್ದಾರೆ. ಆದರೆ, ಮರಾಠ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕಿದೆ' ಎಂದರು.

‘ಜೂನ್‍ನಲ್ಲಿ ಗೋಕಾಕ ಕ್ಷೇತ್ರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್,  ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದು, 4 ಲಕ್ಷದಿಂದ 5 ಲಕ್ಷ ಜನರನ್ನು ಸೇರಿಸುವ ಉದ್ದೇಶವಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

‘ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಬಳಿ ದಾಖಲೆ ಇದ್ದರೆ ಸಿಐಡಿಗೆ ಕೊಡಲಿ. ಮೂರು ಬಾರಿ ನೋಟಿಸ್ ಕೊಟ್ಟಿದ್ದರೂ ವಿಚಾರಣೆಗೆ ಹಾಜರಾಗಿಲ್ಲ. ಬಿಟ್ ಕಾಯಿನ್ ವಿಚಾರದಲ್ಲೂ ಕೇವಲ ಹೇಳಿಕೆ ನೀಡಿ ದಾರಿ ತಪ್ಪಿಸಿದ್ದರು. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ತಲೆದಂಡ ಆಗಲೇಬೇಕು. ಭ್ರಷ್ಟಾಚಾರದ ವಿಷಯದಲ್ಲಿ ಕ್ಷಮೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ನನ್ನ ವಿರುದ್ಧವೂ ಸುಳ್ಳು ಆರೋಪ ಮಾಡಲಾಗುತ್ತಿದೆ. ಆದರೆ, ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನಾನು ಅಧ್ಯಕ್ಷನೇ ಅಲ್ಲ. ನನ್ನ ಪುತ್ರ ಅಧ್ಯಕ್ಷ ಆಗಿದ್ದಾನೆ. ಸ್ವತಂತ್ರವಾಗಿ ಉದ್ಯೋಗ ಮಾಡುತ್ತಿದ್ದಾನೆ. ಅವ್ಯವಹಾರ ಆಗಿದ್ದರೆ, ಹಣ ತುಂಬದಿದ್ದರೆ ಬ್ಯಾಂಕ್‍ನವರು ಈವರೆಗೆ ಬಿಡುತ್ತಿದ್ದರೇ? ಆಧಾರ ರಹಿತ ಆರೋಪ ಮಾಡುವುದು ಕಾಂಗ್ರೆಸ್ ಚಾಳಿ ಆಗಿದೆ' ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News