ಮೂಡಿಗೆರೆ : ಶಾಸಕ ಎಂ.ಪಿ ಕುಮಾರಸ್ವಾಮಿಯಿಂದ ಸಬ್ ಇನ್ಸ್‌ಪೆಕ್ಟರ್ ರವೀಶ್ ಗೆ ನಿಂದನೆ

Update: 2022-05-06 03:55 GMT
ಎಂ.ಪಿ ಕುಮಾರಸ್ವಾಮಿ

ಮೂಡಿಗೆರೆ : ಹೊಸದಾಗಿ ಚಾರ್ಜ್ ತೆಗೆದುಕೊಂಡ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಯ‌ ಸಬ್ ಇನ್ಸ್‌ಪೆಕ್ಟರ್ ರವೀಶ್ ಅವರನ್ನು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ನಿಂದಿಸಿದ್ದಾರೆ ಎನ್ನಲಾದ ಫೋನ್‌ ಕರೆಯೊಂದು ವೈರಲ್‌ ಆಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ರವೀಶ್ ಅವರನ್ನು ಶಾಸಕ ಎಂಪಿ ಕುಮಾರಸ್ವಾಮಿ ನಿಂದಿಸಿರುವುದಾಗಿ ತಿಳಿದುಬಂದಿದೆ.

"ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ, ಎಲ್ಲಿದ್ದೀಯಾ? ನಿನ್ನನ್ನ ಇಲ್ಲಿಗೆ ಬರಬೇಡ ಎಂದು  ಹೇಳಿದ್ದೆ ತಾನೆ? ಮತ್ತೆ ಏಕೆ ಬಂದಿದ್ದೀಯಾ? ನೀನು ವಾಪಸ್ ಹೋಗು, ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ. ಮರ್ಯಾದೆ ಯಿಂದ ವಾಪಸ್ ಹೋಗೋ ಲೇ.!, ನಾನು ಹೇಳಿದ ಹಾಗೆ ಕೇಳು, ಬೇಕಾದ್ರೆ ರೆಕಾರ್ಡ್ ಮಾಡ್ಕೋ. ಬಂದ ರೀತಿಯಲ್ಲೇ ವಾಪಸ್ ಹೋಗು, ನಾಳೆಯೇ ನಿನ್ನ ಡೆಪ್ಟೇಶನ್ ಮಾಡಿಸುತ್ತೇನೆ. ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ.? ಯಾವನೂ ಐಜಿ.? ಐಜಿಯಲ್ಲ, ಮೂಡಿಗೆರೆಲಿ ಎಲ್ಲಾ ನಾನೆ... ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ ಎಂದು ಫೋನ್‌ ಕರೆಯಲ್ಲಿ ನಿಂದಿಸಿರುವ ಆಡಿಯೊ ವೈರಲ್‌ ಆಗಿದೆ.

ಮೂಡಿಗೆರೆ ಶಾಸಕ ಕುಮಾರಸ್ವಾಮಿ ವಿರುದ್ಧ ಇಂತಹದ್ದೇ ಆರೋಪ ಇದ್ದು, ತನಗೆ ಆಗದ, ತನ್ನ ಮಾತು ಕೇಳದ ಅಧಿಕಾರಿಗಳನ್ನು ನಿಂದಿಸಿ ವರ್ಗಾವಣೆ ಮಾಡಿಸುತ್ತಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಈ ಬಗ್ಗೆ ವಾರ್ತಾಭಾರತಿಯೊಂದಿಗೆ ಮಾತನಾಡಿದ ಶಾಸಕ ಎಂಪಿ ಕುಮಾರಸ್ವಾಮಿ, "ಮಲ್ಲಂದೂರು ಠಾಣಾಧಿಕಾರಿಗೆ ಆವಾಝ್ ಹಾಕಿದ್ದು ನಿಜ, ಆತ ಹೊಸದಾಗಿ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಸೌಜನ್ಯಕ್ಕಾದರೂ ನನಗೆ ಮಾಹಿತಿ ನೀಡಿಲ್ಲ. ಬೇಟಿಯಾಗಿಲ್ಲ. ಕ್ಷೇತ್ರದ ಆಗು ಹೋಗುಗಳ ಬಗ್ಗೆ ನನಗೆ ಮಾಹಿತಿ ಬೇಡವೇ?, ಆತ ಐಜಿ ಸೇರಿ ಎಲ್ಲರಿಗೂ ಲಂಚ ನೀಡಿ ಬಂದಿದ್ದಾನೆ. ನಾನು ಮಾತನಾಡಿದ್ದನ್ನು ರೆಕಾರ್ಡ್ ಮಾಡಿದ್ದಾನೆ. ಈ ಬಗ್ಗೆ ಆತನ ವಿರುದ್ಧ ಹಕ್ಕು ಚ್ಯುತಿ ಮಂಡಿಸು‌ತ್ತೇನೆ. ನಾನು ಠಾಣಾಧಿಕಾರಿಗೆ ಆವಾಝ್ ಹಾಕಿದ್ದು ನಿಜ, ನನ್ನ ಮಾತಿಗೆ ನಾನು ಈಗಲೂ ಬದ್ಧ, ಅತ ಲಂಚ ನೀಡಿ ಬಂದಿದ್ದಾನೆ. ಭ್ರಷ್ಟರು ನನ್ನ ಕ್ಷೆತ್ರದಲ್ಲಿರಬಾರದು" ಎಂದು ಹೇಳಿದ್ದಾರೆ. 

ಕರೆ ಸ್ವೀಕರಿಸದ ಮಲ್ಲಂದೂರು ಠಾಣಾಧಿಕಾರಿ: ಶಾಸಕ ಕುಮಾರಸ್ವಾಮಿ ಆವಾಝ್ ಹಾಕಿದ್ದಾರೆಂಬ ಆರೋಪ ಸಂಬಂಧ ಮಾಹಿತಿ ಪಡೆಯಲು ಮಲ್ಲಂಧೂರು ಠಾಣಾಧಿಕಾರಿ ರವೀಶ್ ಅವರಿಗೆ ವಾರ್ತಾಭಾರತಿ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸಿಲ್ಲ.

"ಸಂಭಾಷಣೆಯ ತುಣುಕಿನಲ್ಲಿ ವರ್ಗಾವಣೆಗಾಗಿ  ಹಣ ವಿನಿಮಯವಾಗಿರುವ ಬಗ್ಗೆ ಸ್ವತಃ ಕುಮಾರಸ್ವಾಮಿಯವರೇ ಖಚಿತಪಡಿಸಿರುವುದರಿಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಬಗ್ಗೆ ಶಾಸಕ ಎಂಪಿ ಕುಮಾರಸ್ವಾಮಿಯನ್ನು ತನಿಖೆಗೆ ಒಳಪಡಿಸಬೇಕು, ಪಿಎಸ್ಐ ನೇಮಕಾತಿ ಹಗರಣದ ಅಕ್ರಮವನ್ನು ಚುರುಕುಗೊಳಿಸಿರುವ CID ಅಧಿಕಾರಿಗಳು ಶಾಸಕ ಕುಮಾರಸ್ವಾಮಿಯನ್ನು ಕೂಡ ವಿಚಾರಣೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.‌ ಅನಂತ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News