×
Ad

ಚಿಕ್ಕಮಗಳೂರು: ಕೊರೋನದಿಂದ ಸೊರಗಿದ್ದ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಚೇತರಿಕೆ

Update: 2022-05-06 12:08 IST

ಚಿಕ್ಕಮಗಳೂರು ಮೇ 6: ಸೋಂಕಿನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸೊರಗಿದ್ದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಇದೀಗ ಚೇತರಿಕೆ ಹಾದಿಯಲ್ಲಿ ಸಾಗತೊಡಗಿದ್ದು, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿರುವುದು ಒಂದೆಡೆಯಾದರೇ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಪ್ರಾಕೃತಿಕ ಸೌಂದರ್ಯವನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಗಿರಿಶ್ರೇಣಿ ಪ್ರದೇಶಗಳಾದ ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಯಾತ್ರಸ್ಥಳಗಳಾದ ಶೃಂಗೇರಿ, ಹೊರನಾಡು, ಕಳಸ, ಜಲಪಾತಗಳಾದ ಕಲ್ಹತ್ತಗಿರಿ, ಹೆಬ್ಬೆ, ಶಂಕರಫಾಲ್ಸ್, ಸಿರಿಮನೆ ನೋಡುಗರ ಕಣ್ಮನ ಸೆಳೆಯುತ್ತಿವೆ. ಫೆಬ್ರವರಿಯಲ್ಲಿ ಒಟ್ಟು 3,37,893 ಪ್ರವಾಸಿಗರು ಭೇಟಿನೀಡಿ ವಿವಿಧ ಪ್ರವಾಸಿಸ್ಥಳಗಳನ್ನು ವೀಕ್ಷಿಸಿದ್ದಾರೆ. ಶೃಂಗೇರಿಗೆ 1.37 ಲಕ್ಷ, ಹೊರನಾಡಿಗೆ 1.20 ಲಕ್ಷ, ಕಳಸಕ್ಕೆ 35 ಸಾವಿರ, ದತ್ತಪೀಠಕ್ಕೆ 27 ಸಾವಿರ, ಕೆಮ್ಮಣ್ಣುಗುಂಡಿಗೆ 18 ಸಾವಿರ ಮಂದಿ ಭೇಟಿನೀಡಿದ್ದಾರೆ.

ಮಾರ್ಚ್‌ನಲ್ಲಿ ಒಟ್ಟು 3,10,840 ಪ್ರವಾಸಿಗರು ಭೇಟಿನೀಡಿದ್ದಾರೆ. ಅದರಲ್ಲಿ ಶೃಂಗೇರಿಗೆ 1.38 ಲಕ್ಷ, ಹೊರನಾಡಿಗೆ 1.17 ಲಕ್ಷ, ಕಳಸಕ್ಕೆ 11 ಸಾವಿರ, ದತ್ತಪೀಠಕ್ಕೆ 28 ಸಾವಿರ, ಕೆಮ್ಮಣ್ಣುಗುಂಡಿಗೆ 16 ಸಾವಿರ ಪ್ರವಾಸಿಗರು ಭೇಟಿಕೊಟ್ಟಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ 200 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದರ ಅರ್ಧದಷ್ಟು ಹಣ ಬಿಡುಗಡೆಯಾಗಲಿದೆ. ಕೋಟೆಕೆರೆ ಅಭಿವೃದ್ಧಿಗೆ 44 ಲಕ್ಷ ರೂ. ಮೀಸಲಿಟ್ಟಿದ್ದು, ಆ ಹಣವನ್ನು ವಿವಿಧ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ವಾಹನ ನೀಡಿಕೆ ಸ್ಥಗಿತ: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರು ಸ್ವ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಪೋತ್ಸಾಹಧನದೊಂದಿಗೆ ನೀಡುತ್ತಿದ್ದ ಪ್ರವಾಸಿ ವಾಹನಗಳನ್ನು ಕಳೆದೆರಡು ವರ್ಷಗಳಿಂದ ಸ್ಥಗಿತಗೊಳಿಸಲಗಿದೆ.


6 ಹೋಮ್‌ಸ್ಟೇ ಬಂದ್: ನಿಯಮ ಉಲ್ಲಂಘಿಸಿದ ಜಿಲ್ಲೆಯ 6 ಹೋಮ್‌ಸ್ಟೇಗಳ ಬಾಗಿಲು ಮುಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 486 ಹೋಮ್‌ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ 300, ನಗರ 1, ತರೀಕೆರೆ 6, ಮೂಡಿಗೆರೆ 148, ಶೃಂಗೇರಿ 9, ನರಸಿಂಹರಾಜಪುರ 1,ಕೊಪ್ಪ ತಾಲೂಕಿನಲ್ಲಿ 21 ಹೋಮ್‌ಸ್ಟೇಗಳಿದ್ದು, ಇವು ಜಿಲ್ಲೆಯಲ್ಲಿರುವ ಅಧಿಕೃತ ಹೋಮ್ ಸ್ಟೇಗಳಾಗಿವೆ. ಅನಧಿಕೃತ ಹೋಮ್ ಸ್ಟೇಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.

-----------------------------------------------------

ರಸ್ತೆಗಳ ಅಭಿವೃದ್ಧಿಗೆ 33.33 ಕೋಟಿ ರೂ., ಕಟ್ಟಡ ನಿರ್ಮಾಣಕ್ಕೆ 11ಕೋಟಿ ರೂ., ಕೆಆರ್‌ಐಡಿಎಲ್‌ಗೆ 8 ಕೋಟಿ ರೂ. ಪುರಾತತ್ವ ಇಲಾಖೆಗೆ 85 ಲಕ್ಷ ರೂ. ಬಿಡುಗಡೆಗೊಂಡಿದ್ದು, 81.14 ಕೋಟಿ ರೂ. ಅನುದಾನ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಗೊಳ್ಳಬೇಕಿದೆ. ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆಗೆ ಬರುತ್ತಿರುವ ಅನುದಾನದಲ್ಲಿ ಕಡಿತವಾಗಿದೆ. ಕೊರೋನ ಸೋಂಕಿನ ಕಾರಣಕ್ಕೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸಿಕ್ಕಿರುವ ಅನುದಾನದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ಆರ್.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News