PSI ನೇಮಕಾತಿ ಹಗರಣ: ಪರೀಕ್ಷಾ ಕೇಂದ್ರಗಳ ಉಸ್ತುವಾರಿಗಳಿಗೆ ನೋಟಿಸ್ ನೀಡಲು ಸಿಐಡಿ ನಿರ್ಧಾರ

Update: 2022-05-06 14:32 GMT
ಫೈಲ್ ಚಿತ್ರ

ಬೆಂಗಳೂರು, ಮೇ 6: ಪೊಲೀಸ್ ಸಬ್ ಇನ್‍ಸ್ಪೆಕ್ಟರ್ 545 ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೆ 47 ಮಂದಿಯನ್ನು ಬಂಧಿಸಲಾಗಿದೆ ಹಾಗೂ 25ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳ ಉಸ್ತುವಾರಿ ವಹಿಸಿದ್ದ ಡಿವೈಎಸ್‍ಪಿ, ಕೆಳಹಂತದ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ನೀಡಲಿದೆ ಎನ್ನಲಾಗುತ್ತಿದೆ.  

ಕಲಬುರಗಿಯಲ್ಲಿ ಈ ಮೊದಲು ಆರು ಮಂದಿಯನ್ನು ಬಂಧಿಸಲಾಗಿತ್ತು. ಗುರುವಾರ ಒಬ್ಬ ಡಿವೈಎಸ್‍ಪಿ ಹಾಗೂ ಇನ್‍ಸ್ಪೆಕ್ಟರ್‍ರೊಬ್ಬರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಪಿಎಸ್‍ಐಗಳು ಬಂಧನಕ್ಕೊಳಗಾಗಿದ್ದಾರೆ. ಒಟ್ಟು 10 ಮಂದಿ ಪೊಲೀಸರನ್ನುಬಂಧಿಸಲಾಗಿದೆ. ಸದ್ಯ ಹೊಸದಾಗಿ 25ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳ ಉಸ್ತುವಾರಿಗಳಿಗೆ ಸಿಐಡಿ ನೋಟಿಸ್ ನೀಡಲಿದೆ ಎನ್ನಲಾಗುತ್ತಿದೆ.  

ಪ್ರತಿ ಕೇಂದ್ರಕ್ಕೂ ಡಿವೈಎಸ್‍ಪಿ ಅಥವಾ ಎಸಿಪಿ ನೇತೃತ್ವದಲ್ಲಿ ಉಸ್ತುವಾರಿಯನ್ನು ವಹಿಸಲಾಗಿತ್ತು. ಅಲ್ಲಿನ ಪರೀಕ್ಷಾ ಅಕ್ರಮಗಳ ತಡೆ, ಶಾಂತಿಯುತ ಹಾಗೂ ನಿರ್ಭೀತ ಪರೀಕ್ಷೆ ನಡೆಸುವುದು ಉಸ್ತುವಾರಿ ಅಧಿಕಾರಿಗಳ ಜವಾಬ್ದಾರಿಯಾಗಿತ್ತು. ಆದರೆ, ಕೆಲವು ಕೇಂದ್ರಗಳಲ್ಲಿ ಇದು ಉಲ್ಲಂಘನೆಯಾಗಿದೆ. ಪರೀಕ್ಷಾ ಶಿಷ್ಟಾಚಾರಗಳನ್ನು ಪಾಲಿಸದೆ ಅನುಮಾನಕ್ಕೆಡೆಯಾಗುವಂತೆ ವರ್ತಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 36 ಒಎಂಆರ್ ಶೀಟುಗಳನ್ನು ತಪಾಸಣೆಗೆ ಒಳಪಡಿಸಿದಾಗ 22 ಅಭ್ಯರ್ಥಿಗಳ ಕಾರ್ಬನ್ ಮತ್ತು ಮೂಲ ಒಎಂಆರ್ ಶೀಟ್‍ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅವರಲ್ಲಿ ಈವರೆಗೂ 14 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅದರಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚಿನ ಕೇಂದ್ರಗಳಲ್ಲಿ ಅವ್ಯವಹಾರದ ಸುಳಿವನ್ನು ಸಿಐಡಿ ಗುರುತಿಸಿದೆ. 

ಅಧಿಕಾರಿಗಳಿಂದ ವಕೀಲರಿಗೆ ಮೊರೆ: ಸಿಐಡಿ ತಂಡಗಳು ಏಕಾಏಕಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದೇ ತಾಳ್ಮೆಯಿಂದ ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳು ಪ್ರತಿ ಪ್ರಕರಣದಲ್ಲೂ ಖಚಿತ ಹಾಗೂ ಸ್ಪಷ್ಟ ಪುರಾವೆಗಳ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ವೇಳೆ ಪೊಲೀಸ್ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆತಂಕದಿಂದ ಬಹಳಷ್ಟು ಮಂದಿ ವಕೀಲರಿಗೆ ಮೊರೆ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪರಿಷತ್ ನಾಮನಿರ್ದೇಶಿತ ಸದಸ್ಯತ್ವದಿಂದ ರದ್ದಾಗದ ಹಾಗರಗಿ! 

ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಜೈಲುಪಾಲಾಗಿರುವ ದಿವ್ಯಾ ಹಾಗರಗಿ ಹೆಸರು ನರ್ಸಿಂಗ್ ಅಕ್ರಮದಲ್ಲೂ ಕೇಳಿ ಬಂದಿದೆ. ದಿವ್ಯಾ ಹಾಗರಗಿ, ಕರ್ನಾಟಕ ರಾಜ್ಯ ಶುಶ್ರೂಷ್ ಪರಿಷತ್(ಕರ್ನಾಟಕ ಸ್ಟೇಟ್ ನರ್ಸಿಂಗ್ ಕೌನ್ಸಿಲ್-ಕೆಎನ್‍ಎಸ್‍ಸಿ) ನಾಮನಿರ್ದೇಶಿತ ಸದಸ್ಯೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದರಲ್ಲೂ ಕೂಡ ಭಾರಿ ಅಕ್ರಮ ನಡೆಸಿದ್ದಾರೆ ಎಂಬ ಕೂಗು ಜೋರಾಗಿದೆ. ಇಷ್ಟಾದರೂ ಅವರ ಸದಸ್ಯತ್ವ ಇನ್ನೂ ರದ್ದಾಗದಿರುವುದು ಅಚ್ಚರಿಗೆ ಕಾರಣವಾಗಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News