ಶಿಯೋಮಿ ಸಂಸ್ಥೆಯ ಬ್ಯಾಂಕ್ ಖಾತೆ ಜಪ್ತಿ ಮಾಡಿದ್ದ ಈಡಿ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತಡೆ

Update: 2022-05-06 14:10 GMT

ಬೆಂಗಳೂರು, ಮೇ 6: ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ(ಫೆಮಾ) ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಜಾರಿ ನಿರ್ದೇಶನಾಲಯ(ಈಡಿ) ಚೀನಾದ ಶಿಯೋಮಿ ಸ್ಥಂಸ್ಥೆಯ ಬ್ಯಾಂಕ್ ಖಾತೆಗಳಿಂದ 5,551 ಕೋಟಿ ರೂ. ಜಪ್ತಿ ಮಾಡಿದ್ದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ. 

ಸ್ಥಳೀಯ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದ ಈಡಿ ಕ್ರಮ ಪ್ರಶ್ನಿಸಿ ಶಿಯೋಮಿ ಟೆಕ್ನಾಲಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಮಾಡಿದೆ. 

ಜಾರಿ ನಿರ್ದೇಶನಾಲಯವು ಕಳೆದ ವಾರ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ಯಾಂಕ್ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು. ಕಂಪೆನಿಯು ‘ರಾಯಧನದ ಸೋಗಿನಲ್ಲಿ’ ಒಂದು ಶಿಯೋಮಿ ಗ್ರೂಪ್ ಘಟಕ ಸೇರಿದಂತೆ ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ಹಣವನ್ನು ಅಕ್ರಮವಾಗಿ ರವಾನೆ ಮಾಡಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಂಡಿತ್ತು.

ಇದನ್ನು ಪ್ರಶ್ನಿಸಿದ್ದ ಸಂಸ್ಥೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿತ್ತು. ರಾಯಲ್ಟಿ ಪಾವತಿಗಳಂತಹ ನಿಧಿ ವರ್ಗಾವಣೆಗಳ ಬಗ್ಗೆ ಶಿಯೋಮಿ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂಬ ಷರತ್ತಿನ ಮೇಲೆ ಹೈಕೋರ್ಟ್ ಈಡಿ ಕ್ರಮಕ್ಕೆ ತಡೆ ನೀಡಿದ್ದು, ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News