ನಾನು ಗೃಹ ಮಂತ್ರಿಯಾಗಿದ್ದರೆ, ಎಲ್ಲವನ್ನೂ ಮಟ್ಟ ಹಾಕುತ್ತಿದ್ದೆ: ರಾಮಲಿಂಗಾರೆಡ್ಡಿ

Update: 2022-05-06 14:15 GMT

ಬೆಂಗಳೂರು, ಮೇ 6: ‘ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಇದ್ದವರು ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಕೋವಿಡ್ ಸಾವಿನ ಪ್ರಮಾಣಪತ್ರ ನೀಡುವುದಿಲ್ಲ. ಹೀಗೆ ಬೇರೆ ಕಾಯಿಲೆ ಇರುವವರು ಕೋವಿಡ್ ಸೊಂಕಿನಿಂದ ಸತ್ತರೆ ಅವರ ಸಾವನ್ನು ಸರಕಾರ ಮುಚ್ಚಿಟ್ಟಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಕೋವಿಡ್ ಸಾವಿನ ಕುರಿತು ಸುಳ್ಳು ಲೆಕ್ಕ ಕೊಟ್ಟಿದ್ದು, ಈ ವಿಚಾರವಾಗಿ ನಾನು ಈ ಹಿಂದೆಯೇ ಪ್ರಶ್ನೆ ಕೇಳಿದ್ದೆ. ಬಿಜೆಪಿ ಸರಕಾರ ಸಾವಿನ ಲೆಕ್ಕ ಮುಚ್ಚಿಟ್ಟ ಹಿನ್ನೆಲೆ 2019 ಹಾಗೂ 2020ರಲ್ಲಿ ಸತ್ತವರ ಸಂಖ್ಯೆಯಲ್ಲಿನ ವ್ಯತ್ಯಾಸದ ಅಂಕಿ ಅಂಶಗಳನ್ನು ಮುಂದಿಟ್ಟು ಸರಕಾರದ ಸುಳ್ಳು ಲೆಕ್ಕವನ್ನು ಪ್ರಶ್ನಿಸಿದ್ದೆ' ಎಂದು ತಿಳಿಸಿದರು.

‘ದೇಶದಲ್ಲಿ 42 ಲಕ್ಷ ಜನ ಸತ್ತಿದ್ದಾರೆಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ, ಈಗ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಕೋವಿಡ್‍ನಿಂದ ಸತ್ತವರ ಕುರಿತು ವರದಿ ಪ್ರಕಟಿಸಿದ್ದು, ಅವರ ಪ್ರಕಾರ ಭಾರತದಲ್ಲಿ 47 ಲಕ್ಷ ಜನ ಕೊರೋನಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ. ಬಿಜೆಪಿ ಸರಕಾರಗಳು ಸಾವಿನ ಸುಳ್ಳು ಲೆಕ್ಕ ನೀಡಿ ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಿರುವುದಾಗಿ ಜಂಭ ಕೊಚ್ಚಿಕೊಳ್ಳುತ್ತಿದ್ದರು.

ಭಾರತ ದೇಶದ ಇತಿಹಾಸದಲ್ಲಿ ಯಾವ ಸಾಂಕ್ರಾಮಿಕ ಮಹಾಮಾರಿ, ಪಿಡುಗಿಗೂ ಇಷ್ಟು ಜನ ಸತ್ತಿರಲಿಲ್ಲ. ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸರಿಯಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಇವರಿಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಇನ್ನೂ ಮೃತಪಟ್ಟವರಿಗೆ ಪರಿಹಾರ ನೀಡುವಲ್ಲಿಯೂ ಸರಕಾರ ವಿಫಲವಾಗಿದೆ' ಎಂದು ಅವರು ವಾಗ್ದಾಳಿ ನಡೆಸಿದರು.

ಗೃಹ ಇಲಾಖೆ ವೈಫಲ್ಯ: ‘ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಹಿಂದೆ ‘ಪೊಲೀಸರನ್ನು ಎಂಜಲು ತಿನ್ನುವ ನಾಯಿಗಳೆಂದು' ಬೈದಿದ್ದರು. ಗೃಹ ಮಂತ್ರಿಯಾಗಿ ಹೀಗೆ ಮಾತನಾಡಿದರೆ ಹೇಗೆ? ಇನ್ನು ಸಿ.ಟಿ.ರವಿ ಅವರು ಪೊಲೀಸರನ್ನು ಇದೇ ರೀತಿ ಅಪಮಾನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಕೆಲಸ ಮಾಡುವುದಾದರೂ ಹೇಗೆ? ಶ್ರೀರಾಮಸೇನೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಕೋಮು ಸೌಹಾರ್ದ ಕದಡುವ ಪ್ರಯತ್ನ ಮಾಡುತ್ತಿದ್ದು, ಎಸ್‍ಡಿಪಿಐ ಸೇರಿದಂತೆ ಇತರ ಸಂಘಟನೆಗಳ ವಿರುದ್ಧ ಕ್ರಮ ಏಕಿಲ್ಲ? ನಾನು ಗೃಹ ಮಂತ್ರಿಯಾಗಿದ್ದರೆ, ಎಲ್ಲವನ್ನೂ ಮಟ್ಟ ಹಾಕುತ್ತಿದ್ದೆ' ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.

ಬಿಜೆಪಿ ಎಡಬಿಡಂಗಿತನಕ್ಕೆ ಸಾಕ್ಷಿ: ‘ಪಿಎಸ್ಸೈ ನೇಮಕಾತಿ ಹಗರಣದ ವಿಚಾರವಾಗಿ ಇದುವರೆಗೂ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ದಾಖಲೆಗಳು ಇಲ್ಲವಾದರೆ ಇಷ್ಟು ಮಂದಿಯನ್ನು ಏಕೆ ಬಂಧಿಸಿದ್ದಾರೆ? ಇಷ್ಟು ಜನರನ್ನು ಬಂಧಿಸಿ ಸಾಕ್ಷಿಗಳಿಲ್ಲ ಎಂದು ಹೇಳುವುದು ಬಿಜೆಪಿಯ ಎಡಬಿಡಂಗಿತನಕ್ಕೆ ಸಾಕ್ಷಿ' ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

‘ಈ ಪ್ರಕರಣದಲ್ಲಿ ಅಕ್ರಮ ನಡೆಯದಿದ್ದರೆ ಸಿಒಡಿಯಿಂದ ತನಿಖೆ ಯಾಕೆ ಮಾಡಿಸುತ್ತಿದ್ದಾರೆ? 545 ಅಭ್ಯರ್ಥಿಗಳ ಆಯ್ಕೆ ಪಟ್ಟಿ ರದ್ದು ಮಾಡಿದ್ದು ಏಕೆ? ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಏಕೆ? ದಾಖಲೆ ಇಲ್ಲದೆ  ಇಷ್ಟೆಲ್ಲಾ ಮಾಡಿದ್ದಾರಾ? ದಾಖಲೆ ಇಲ್ಲದೆ ಪ್ರಿಯಾಂಕ್ ಖರ್ಗೆ ಅವರು ಏನು ಮಾತನಾಡುವುದಿಲ್ಲ. ಅವರು ಹೇಳಿರುವ ಎಲ್ಲ ದಾಖಲೆಗಳು ಸಾರ್ವಜನಿಕವಾಗಿವೆ. ಆದರೂ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟಿದ್ದು ಏಕೆ? ಯಾರೆಲ್ಲ ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಿ' ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News