ನನ್ನ ಜನ್ಮದಿನವನ್ನು ಯಾರೂ ಆಚರಿಸಬಾರದು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2022-05-06 14:36 GMT

ಬೆಂಗಳೂರು, ಮೇ 6: ‘ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿದಂತೆ ಯಾರೂ ನನ್ನ ಜನ್ಮದಿನ ಆಚರಿಸಬಾರದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿಮನವಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಯಾರೂ ತಮ್ಮ ಜನ್ಮದಿನವನ್ನು ಆಚರಿಸಬಾರದು. ಫ್ಲೆಕ್ಸ್, ಕಟೌಟ್, ಭಿತ್ತಿಚಿತ್ರ, ಪೋಸ್ಟರ್ ಯಾವುದನ್ನೂ ಹಾಕಬಾರದು. ಈ ತಿಂಗಳು 12 ರಿಂದ 18ರವರೆಗೆ ತಾವು ಊರಿನಲ್ಲಿ ಇರುವುದಿಲ್ಲ. ರಾಜಸ್ಥಾನದ ಉದಯಪುರದಲ್ಲಿ ನಡೆಯುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳಲಿದ್ದೇನೆ' ಎಂದು ವಿವರಣೆ ನೀಡಿದ್ದಾರೆ.

‘ಹೀಗಾಗಿ ಜನ್ಮದಿನ ಮೇ 15ರಂದು ಯಾರಿಗೂ ಸಿಗುವುದಿಲ್ಲ. ಆ ದಿನ ಯಾರೂ ಶುಭಾಶಯ ಹೇಳಲು, ಅಭಿನಂದಿಸಲು ಮನೆ ಬಳಿ ಬರಬಾರದು ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು. ಇನ್ನು ಜನ್ಮದಿನ ನಿಮಿತ್ತ ಯಾರೂ ಮಾಧ್ಯಮಗಳಲ್ಲಿ ಶುಭಾಶಯಗಳ ಜಾಹೀರಾತು ನೀಡಬಾರದು' ಎಂದು ಅವರು ಕೋರಿದ್ದಾರೆ.

‘ಒಂದೊಮ್ಮೆ ಕೊಡಲೇಬೇಕು ಎಂದೆನಿಸಿದರೆ ಮುಂದೆ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಳ್ಳುವ ಹೋರಾಟ, ಪ್ರತಿಭಟನೆಗಳ ಬಗ್ಗೆ ಜಾಹೀರಾತು ನೀಡಬೇಕೆಂದು ವಿನಂತಿಸುತ್ತೇನೆ. ಅದನ್ನೇ ನೀವು ನನಗೆ ಸಲ್ಲಿಸುವ ಜನ್ಮದಿನದ ಶುಭಾಶಯ ಎಂದು ಪರಿಗಣಿಸುತ್ತೇನೆ' ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News