PSI ಹಗರಣದ ಕಿಂಗ್​ಪಿನ್​ ಹೆಸರು ಹೇಳಿದರೆ ಸರಕಾರ ಪತನ: ಹೆಚ್.ಡಿ.ಕುಮಾರಸ್ವಾಮಿ

Update: 2022-05-06 16:20 GMT

ಹಾಸನ: ಪಿಎಸ್‌ಐ ನೇಮಕಾತಿಯ ಅಕ್ರಮದ ಕಿಂಗ್‌ಪಿನ್ ಹೆಸರು ಹೇಳಲು ಸಾಧ್ಯನಾ..? ಕಿಂಗ್‌ಪಿನ್ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬಿದ್ದುಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದ ಅವರು. ಪಿಎಸ್ ಐ ಹಗರಣದ ಬಗ್ಗೆ ಯಾರೂ ಬಿಜೆಪಿಯಲ್ಲಿ ಮಾತನಾಡುತ್ತಿಲ್ಲ. ಅಲ್ಲಿನ ಭವಿಷ್ಯತ್ ನಾಯಕನ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

ನೇಮಕಾತಿಗಳಲ್ಲಿ ಅಕ್ರಮ ಸರಮಾಲೆಯೇ ಹೊರಬರುತ್ತಿದೆ. ಮಂತ್ರಿಗಳ ಮೇಲೆಯೇ ಆಪಾದನೆ ಬರುತ್ತಿದೆ. ಮಾಗಡಿಯಲ್ಲಿ ಇಬ್ಬರು ಪಿಎಸ್ ಐ ಹುದ್ದೆಗೆ  ಆಯ್ಕೆ ಆಗಿರುವುದಕ್ಕೆ 80 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ? ಹಾಗೆಯೇ ಶಿಕ್ಷಣ ಇಲಾಖೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಯಾರ ಕೈವಾಡ ಇದೆ? ಸಹ ಪ್ರಾಧ್ಯಾಪಕರ ಹುದ್ದೆಗೆ ಕೂಡ 80 ಲಕ್ಷ ರೂಪಾಯಿ ರೇಟ್ ಫಿಕ್ಸ್ ಮಾಡಿದ್ದಾರೆ. ಇದು ಪಿ‌ಎಸ್‌‌ಐ‌ ಹಗರಣಕ್ಕಿಂತ ದೊಡ್ಡ ಹಗರಣ ಎಂದು ಅವರು ಹೇಳಿದರು.

ಪಿಎಸ್‌ಐ ಹಗರಣ ಕಿಂಗ್ ಪಿನ್: ಪಿಎಸ್‌ಐ ನೇಮಕಾತಿ ಹಗರಣದ ಮೂಲ ಕಿಂಗ್ ಪಿನ್ ಹೆಸರು ಹೇಳಲು ಸರ್ಕಾರಕ್ಕೆ ಸಾಧ್ಯ ಇದೆಯಾ? ಅವರನ್ನು ಟಚ್ ಮಾಡಿದರೆ ಸರಕಾರ ಉಳಿಯುತ್ತಾ? ಅವರನ್ನು ಕಂಡರೆ ಎಲ್ಲರೂ ಭಯಪಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಬಿಜೆಪಿ ಮೇಲೆ ಚಾಟಿ ಬೀಸಿದರು.

ಅಶ್ವತ್ಥ್ ನಾರಾಯಣ ಸಚಿವರಾಗಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಪಿಂಚಣಿ ಕೊಡಲು ಇಟ್ಟಂತಹ 1,350 ಕೋಟಿ ರೂಪಾಯಿ  ದುಡ್ಡನ್ನು ಕಟ್ಟಡ ಕಟ್ಟಲು ಡೈವರ್ಟ್ ಮಾಡಿದ್ದಾರೆ. ಯಾರಿಗೆ ಕೆಲಸ ಕೊಟ್ಟಿದ್ದೀರಿ?  ಪಿಡಬ್ಲ್ಯೂಡಿ ಇಲಾಖೆಯಲ್ಲಿ ಎಂಜಿನಿಯರುಗಳು ಇರಲಿಲ್ಲವಾ? ಇಲಾಖೆಯಲ್ಲಿ ಎಬಿವಿಪಿ‌, ಆರ್.ಎಸ್.ಎಸ್. ನವರನ್ನು ಸಿಂಡೆಕೆಟ್ ಸದಸ್ಯರನ್ನಾಗಿ ಮಾಡಿಕೊಂಡು ಅಕ್ರಮ ನಡೆಸುತ್ತಿದ್ದಾರೆ. ಸರಕಾರ ಕೇಳಿದರೆ ಏನು ಮಾಹಿತಿ ಬೇಕು ಕೊಡಲು ಅದನ್ನು ಕೊಡಲು ನಾನು ತಯಾರಿದ್ದೇನೆ ಎಂದು ಕುಮಾರಸ್ವಾಮಿ ಅವರು ದೂರಿದರು.

ಪರೀಕ್ಷೆಗೆ ಮೊದ 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿಕ್ಕಿದೆ. ಈ ಹಗರಣದ ತನಿಖೆ ಹಳ್ಳ ಹಿಡಿಯುತ್ತದೆ. ದುಡ್ಡು ಕೊಟ್ಟು ಬಂದವರು ಸರಿಯಾಗಿ ಕೆಲಸ ಮಾಡುತ್ತಾರಾ? ಎಂದು ಅವರು ಕಿಡಿ ಕಾರಿದರು.

ಯಾವುದಾದರೂ  ಒಂದು ಇಲಾಖೆಯಲ್ಲಿ ಪ್ರಾಮಣಿಕವಾಗಿ ಕೆಲಸ ಮಾಡುವುದನ್ನು ತೋರಿಸಿ. ಅಲ್ಲೆಲ್ಲಾ ದುಡ್ಡು ವಸೂಲಿ ಮಾಡುವಾಗ ತಡಿಲಿಕ್ಕೆ ನಾವು ಒಂದು ತಂಡವನ್ನು ಮಾಡಬೇಕಿದೆ. ದುಡ್ಡು ಸಮೇತ ದಾಖಲೆಗಳನ್ನು ಹಿಡಿಯಲು ಒಂದು ವಿಂಗ್ ರೆಡಿ ಮಾಡಬೇಕಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿಯಾಗಿದೆ. ಇವರ ಕಾಟ ತಡೆಯಲಾಗಿದೆ ಕೆಲ ಅಧಿಕಾರಿಗಳು ರಜೆ ಹಾಕಿ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಅವರು ದೂರಿದರು.

ಗೆಸ್ಟ್ ಹೌಸ್ ನಲ್ಲಿ ವ್ಯವಹಾರ:

ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಹಾರಾಷ್ಟ್ರ ಕೇಡರ್ ಅಧಿಕಾರಿ ಒಬ್ಬರನ್ನು ಕಮಿಷನರ್ ಆಗಿ ಇಟ್ಕೊಂಡಿದ್ದಾರೆ. ಗೆಸ್ಟ್ ಹೌಸ್‌ನಲ್ಲಿ ಕೂತು ಇವೆಲ್ಲ ವ್ಯವಹಾರ ಮಾಡಿದ್ದಾರೆ. ಎಲ್ಲೆಲ್ಲಿ ಗೆಸ್ಟ್ ಹೌಸ್ ಇದ್ಕಂಡು ಏನೇನ್ ಮಾಡ್ತಿದ್ದಾರೆ ಅಂತ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಭಾಗದ ಕಟ್ಟಡ ಕಟ್ಟಲು ಹಣ ಮಂಜೂರಿಗೆ ಉನ್ನತ ಶಿಕ್ಷಣ ಸಚಿವರು ಪತ್ರ ಬರೆದಿದ್ದಾರೆ. ಇದರಲ್ಲಿ 18 ಕೋಟಿಯಿಂದ 85 ಕೋಟಿಗೆ ಅಂದಾಜು ವೆಚ್ಚ ಹೆಚ್ಚಾಗಿದೆ. ಇದರಿಂದ 40% ಕಮಿಷನ್ ತೆಗೆದುಕೊಳ್ಳದೆ ಇನ್ನೇನು ಆಗುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ‌ ನಿರಂತರ ಆಡಳಿತ ದುಷ್ಪರಿಣಾಮ ನಡೆಯುತ್ತಿದೆ. ಇದರಿಂದ ನಮ್ಮ ರಾಜ್ಯ ಎಲ್ಲಿಗೆ ಹೋಗಬಹುದು ಎಂದು ಭಯವಿದೆ. ಯಾರದ್ದೋ ಒಬ್ಬ ಮಂತ್ರಿಯ ತಲೆದಂಡದ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ಮೊದಲು ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ಮಾಡಿದ್ದೆ. ಯಡಿಯೂರಪ್ಪನವರು ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ದರು. ಜೆಡಿಎಸ್ ಪಕ್ಷ ಮತ್ತು ಅಪ್ಪ ಮಕ್ಕಳನ್ನು ಮುಗಿಸುವುದೇ ನನ್ನ ಗುರಿ ಎಂದಿದ್ದರು. ನಾನು ನನ್ನ ಕೊನೆಯ ಭಾಷಣದಲ್ಲಿ ಉತ್ತಮ ಕೆಲಸ ಮಾಡಿ ಎಂದಿದ್ದೆ. ಅಲ್ಲಿಂದ‌ ಇಲ್ಲಿವರೆಗೆ ಭ್ರಷ್ಟಾಚಾರದ‌ ಬಗ್ಗೆಯೂ ಚರ್ಚಿಸಿಲ್ಲ ಎಂದರು ಅವರು.

ಬಿಜೆಪಿ ಸರ್ಕಾರದಲ್ಲಿ ಹಲವಾರು ಇಲಾಖೆಯಲ್ಲಿ ವಿಪರೀತ ಎನ್ನುವಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಇತ್ತೀಚೆಗೆ ನೇಮಕಾತಿ ವಿಚಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಏನೇ ತನಿಖೆ ಮಾಡಿದರು ಕೂಡ ತಾರ್ಕಿಕ ಅಂತ್ಯ ಏನಾಗುತ್ತದೆ? ಈ ಹಿಂದಿನ ಸರ್ಕಾರಗಳು ಯಾವ ರೀತಿ ತನಿಖೆಗೆ ಕ್ರಮ ಕೈಗೊಂಡಿವೆ. ಅಂತಿಮವಾಗಿ ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮ ಆಗುತ್ತದೆ  ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News