ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ, ಪಕ್ಷಕ್ಕೆ ಬರುವವರಿಗೆ ಮುಕ್ತ ಸ್ವಾಗತ: ಸಿಎಂ ಬಸವರಾಜ ಬೊಮ್ಮಾಯಿ

Update: 2022-05-07 12:31 GMT
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 7: ‘ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರವಾದ ದೊಡ್ಡ ಅಲೆ ಇದೆ. ಅದರ ಪ್ರಭಾವದಿಂದ ಹಲವಾರು ಕ್ಷೇತ್ರಗಳಲ್ಲಿ ಪ್ರಥಮ ಬಾರಿಗೆ ವಿಜಯವನ್ನು ಸಾಧಿಸುವ ಅವಕಾಶಗಳು ಸಿಕ್ಕಿವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಯಾವುದೇ ಪಕ್ಷದಿಂದ ನಮ್ಮ ಪಕ್ಷಕ್ಕೆ ಆಗಮಿಸಿದರೂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಬಿಜೆಪಿ ಸೇರಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೇರೆ ಪಕ್ಷಗಳಿಂದ ಬರುವ ಮುಖಂಡರ ಪೈಕಿ ಯಾರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಪಕ್ಷದ ಆಯಾ ಜಿಲ್ಲಾ ಮತ್ತು ರಾಜ್ಯ ಘಟಕ ನೋಡಿಕೊಳ್ಳುತ್ತದೆ. ಬಿಜೆಪಿ ಪಕ್ಷಕ್ಕೆ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೇರೆ ಪಕ್ಷಗಳ ಮುಖಂಡರು ಆಗಮಿಸುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ದೂರು ನೀಡಿದರೆ ತನಿಖೆಯಾಗುತ್ತದೆ. ತನಿಖೆಯ ಬಳಿಕ ತಪ್ಪಿತಸ್ಥರು ಇದ್ದರೆ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News