×
Ad

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಹಲವು ಮುಖಂಡರು ಬಿಜೆಪಿ ಸೇರ್ಪಡೆ

Update: 2022-05-07 18:08 IST
Photo: Twitter/@BJP4Karnataka

ಬೆಂಗಳೂರು, ಮೇ 7: ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷ ತೊರೆದು ವಿದ್ಯುಕ್ತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವರ್ತೂರ್ ಪ್ರಕಾಶ್, ಮಾಜಿ ಸಂಸದ ಕೆ.ಬಿ.ಕೃಷ್ಣಮೂರ್ತಿ, ಮಾಜಿ ಶಾಸಕ ಮಂಜುನಾಥ ಗೌಡ, ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ಮಂಡ್ಯ ಜಿಲ್ಲಾ ಮುಖಂಡ ಅಶೋಕ್ ಜಯರಾಮ್, ಮಾಜಿ ಐಆರ್‍ಎಸ್ ಅಧಿಕಾರಿ ಡಾ.ಲಕ್ಷ್ಮಿಅಶ್ವಿನ್ ಗೌಡ ಸೇರಿ ಎಲ್ಲ ಮುಖಂಡರಿಗೆ ಶಾಲು ಹೊದಿಸಿ, ಬಿಜೆಪಿ ಬಾವುಟವನ್ನು ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. 

ಶನಿವಾರ ಮಧ್ಯಾಹ್ನವಷ್ಟೇ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಆಯ್ಕೆಯಾಗಿದ್ದ ಪ್ರಮೋದ್ ಮಧ್ವರಾಜ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ 72,902 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ವಿರುದ್ಧ ಸೋಲು ಕಂಡಿದ್ದರು.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ, ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆದಿದ್ದರು. ಆ ವೇಳೆ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪ್ರಮೋದ್ ಮಧ್ವರಾಜ್ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎದುರು ಸೋಲನ್ನು ಅನುಭವಿಸಿದ್ದರು.

ಪ್ರಮೋದ್ ಮಧ್ವರಾಜ್ ಸೇರ್ಪಡೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಾಜಕೀಯ ಯಾವಾಗಲೂ ನಿಂತ ನೀರಲ್ಲ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಬಹಳ ಜನ ದಕ್ಷಿಣ ಕರ್ನಾಟಕ ನಮ್ಮ ಕಪಿಮುಷ್ಟಿಯಲ್ಲಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ರಾಜ್ಯದ ಜನತೆ ಬಹಳ ಪ್ರಬುದ್ಧರು. ಜನರಿಗೆ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದ ಮೇಲೆ ಭ್ರಮನಿರಸನ ಆಗಿದೆ' ಎಂದು ಟೀಕಿಸಿದರು.

‘ನಾವು(ಬಿಜೆಪಿ) ಕೃಷಿ, ನೀರಾವರಿ, ಕೈಗಾರಿಕೆ, ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯ ಇದರ ಬಗ್ಗೆ ನಾವು ಕೇವಲ ಮಾತನಾಡುತ್ತಿಲ್ಲ. ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ. ರಾಜಕೀಯದಲ್ಲಿ ವಿಶ್ವಾಸಾರ್ಹತೆ ಮುಖ್ಯ. ಆ ವಿಶ್ವಾಸಾರ್ಹತೆ ಬಿಜೆಪಿ ಮೇಲೆ ಇದೆ. ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಮುಖಂಡರು ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ' ಎಂದು ಬಸವರಾಜ ಬೊಮ್ಮಾಯಿ ನುಡಿದರು.

‘ನಮ್ಮ ಪಕ್ಷಕ್ಕೆ ಸೇರ್ಪಡೆಯಾದವರು ಜನ ಸಮೂಹಕ್ಕೆ ಹತ್ತಿರವಿರುವವರು. ಜನರ ನಾಡಿಮಿಡಿದ ಅರಿತು, ಯುವ ಜನರು ಬದಲಾವಣೆ ತವಕದಲ್ಲಿದ್ದಾರೆ. ಈ ದೇಶವನ್ನು ಅಖಂಡತೆ ರಕ್ಷಣೆ ಮಾಡುವ ಮತ್ತು ಭಾರತ ವಿಶ್ವಗುರು ಮಾಡುವ ಶಕ್ತಿ ನರೇಂದ್ರ ಮೋದಿಯವರಿಗೆ ಇದೆ. ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ಅಭಿವೃದ್ಧಿ ಆರ್ಥಿಕತೆಗೆ ಒತ್ತು ನೀಡುವ ಬಿಜೆಪಿಗೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಟೀಕೆ ಮಾಡುವುದು ಸುಲಭ. ಆದರೆ, ಸವಾಲುಗಳನ್ನು ಮೆಟ್ಟಿನಿಂತು ದೇಶವನ್ನು ಮುನ್ನಡೆಸುವ, ದೇಶವನ್ನು ಸದೃಢ ಮಾಡುವ ಶಕ್ತಿ ಮೋದಿಯವರಿಗೆ ಮಾತ್ರ ಇದೆ' ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ನಮ್ಮ ಗುರಿಗೆ ಆನೆ ಬಲ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳಿಗೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದ್ದೇವೆ. ಆ ನಿಟ್ಟಿನಲ್ಲಿ ಇಂದು ಪಕ್ಷಕ್ಕೆ ಸೇರ್ಪಡೆಯಾದ ಎಲ್ಲ ಮುಖಂಡರಿಂದ ನಮ್ಮ ಗುರಿಗೆ ಆನೆ ಬಲ ಬಂದಿದೆ' ಎಂದು ಬಸವರಾಜ ಬೊಮ್ಮಾಯು ತಿಳಿಸಿದರು.

'ಇದು ಮೊದಲ ಪಟ್ಟಿ': ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ‘ಇಂದು ಪಕ್ಷಕ್ಕೆ ಸೇರ್ಪಡೆ ಆಗಿರುವವರು ಮೊದಲ ಪಟ್ಟಿ ಮಾತ್ರ. ಇನ್ನೊಂದು ಪಟ್ಟಿಯೂ ಇದೆ. ಇದಲ್ಲದೆ ಇನ್ನೊಂದು ಹಾಲಿ ಶಾಸಕರ ಪಟ್ಟಿಯೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಬಳಿ ಇದೆ. ತಾಂತ್ರಿಕ ಕಾರಣದಿಂದ ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಚುನಾವಣಾ ದೃಷ್ಟಿಯಿಂದ ಗೆಲ್ಲುವವರನ್ನು ಗುರುತಿಸಿ ಸೇರ್ಪಡೆ ಮಾಡಲಾಗುತ್ತಿದೆ' ಎಂದು ಸ್ಪಷ್ಟಣೆ ನೀಡಿದರು.

‘ನಮ್ಮ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಮುಖ್ಯಮಂತ್ರಿ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಏಳು ಬಾರಿ ರಾಜ್ಯ ಸುತ್ತಿದ್ದು, ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ಜೋಡಿ ಪರ್ಮನೆಂಟ್ (ಶಾಶ್ವತ) ಜೋಡಿ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 150 ಸ್ಥಾನಗಳು ಬರುವುದು ನಿಶ್ಚಿತ' ಎಂದು ಸಚಿವ ಅಶೋಕ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಮುನಿರತ್ನ, ನಾರಾಯಣಗೌಡ, ಡಾ.ಕೆ.ಸುಧಾಕರ್, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಸಂಸದ ಮುನಿರಾಜು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ಯಾವುದೇ ಷರತ್ತು ಇಲ್ಲದೆ ನಾನು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇಟ್ಟು ಬಿಜೆಪಿಯನ್ನು ಸೇರಿದ್ದೇನೆ. ಬಿಜೆಪಿ ಈಗಾಗಲೇ ಸಾಕಷ್ಟು ಬಲಗೊಂಡಿದೆ. ಇನ್ನಷ್ಟು ಬಲಪಡಿಸಲು ನಾನು ಬಿಜೆಪಿ ಸೇರಿದ್ದೇನೆ'
-ಪ್ರಮೋದ್ ಮಧ್ವರಾಜ್ ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News