×
Ad

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: 12 ಪೊಲೀಸರ ಅಮಾನತು, 12 ವರ್ಗಾವಣೆ

Update: 2022-05-07 19:32 IST

ಬೆಂಗಳೂರು, ಮೇ 7: ಪಿಎಸ್ಸೈ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದರ ನಡುವೆ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 12 ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿದರೆ, ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಇನ್‍ಸ್ಪೆಕ್ಟರ್ ಆನಂದ ಮೇತ್ರೆ ಸೇರಿದಂತೆ 12 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ವರ್ಗಾವಣೆ ಸಂಬಂಧ ನೇಮಕಾತಿ ವಿಭಾಗದ ಎಡಿಜಿಪಿ ಹಿತೇಂದ್ರ ಆದೇಶ ಹೊರಡಿಸಿದ್ದು, ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 17 ಪೊಲೀಸ್ ಸಿಬ್ಬಂದಿ 12 ಮಂದಿಯನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. 

ಸದ್ಯಕ್ಕೆ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ಉಳಿಸಿಕೊಳ್ಳಲಾಗಿದೆ. ಖಾಲಿ ಇರುವ 12 ಸ್ಥಾನಕ್ಕೆ ಹೊಸಬರು ಬಂದ ಬಳಿಕ ಉಳಿದ ಐವರ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಪಿಎಸ್ಸೈ ಅಕ್ರಮ ನೇಮಕಾತಿ ಪ್ರಕರಣ ಬೆನ್ನಲ್ಲೇ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಭಾರಿ ಬದಲಾವಣೆಯಾಗಿದೆ. ಕೆಲವರ ಕೈವಾಡವಿರುವ ಶಂಕೆ ಇದ್ದು, ಇಲಾಖೆಗೆ ಕೆಟ್ಟ ಹೆಸರು ಬಂದ ಹಿನ್ನೆಲೆಯಲ್ಲಿ ಹಿತೇಂದ್ರ ಇಂತಹದೊಂದು ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮಾನತು: ಪ್ರಕರಣದಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಬೆರಳಚ್ಚು ವಿಭಾಗದ ಇನ್‍ಸ್ಪೆಕ್ಟರ್ ಆನಂದ್ ಮೇತ್ರೆ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಇದೀಗ ಅವರನ್ನು ಅಮಾನತುಗೊಳಿಸಲಾಗಿದೆ.

ಅದೇ ರೀತಿ, ಕಲಬುರ್ಗಿ ನಗರದ ಜ್ಞಾನಜ್ಯೋತಿ ಹಾಗೂ ಎಂ.ಎಸ್.ಇರಾಣಿ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ರವಿಕುಮಾರ್ ತಿಳಿಸಿದ್ದಾರೆ.

ಪ್ರಮುಖವಾಗಿ ಪಿಎಸ್ಸೈ ಶೈಲಮ್ಮಾ, ನಝಮಾ ಸುಲ್ತಾನಾ, ಎಎಸ್ಸೈಗಳಾದ ಶಶಿಕುಮಾರ್, ಲತಾ, ಹೆಡ್ ಕಾನ್‍ಸ್ಟೇಬಲ್‍ಗಳಾದ ಪಾರುಬಾಯಿ, ಜೈ ಭೀಮ್, ಶರಣಬಸಪ್ಪ, ದಾಮೋದರ್, ಕಾನ್‍ಸ್ಟೇಬಲ್‍ಗಳಾದ ಪ್ರದೀಪ್ ಮತ್ತು ರಾಜಶ್ರೀ ಸೇರಿ ಒಟ್ಟು 10 ಜನರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News