×
Ad

ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ: ಶಾಸಕ ಯತ್ನಾಳ್

Update: 2022-05-07 20:15 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ: ದಿಲ್ಲಿಯಿಂದ ತನ್ನ ಬಳಿಗೆ ಬಂದಿದ್ದ ಹಲವರು, ನಿಮ್ಮನ್ನು ಸಿಎಂ ಮಾಡುತ್ತೀವಿ 2,500 ಕೋಟಿ ರೂ.ಹೊಂದಿಸಿಟ್ಟುಕೊಳ್ಳಿ ಎಂದಿದ್ದರು ಎಂದು ಹೇಳಿಕೆ ನೀಡಿದ್ದ ಬಿಜೆಪಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ಯು ಟರ್ನ್ ಹೊಡೆದಿದ್ದಾರೆ.

ಶನಿವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ ಯು ಟರ್ನ್ ಹೊಡೆದಿದ್ದಾರೆ. 

ಬಿಜೆಪಿಯಲ್ಲಿ ಅರ್ಹತೆ ಮೇಲೆಯೇ ಸ್ಥಾನಮಾನವನ್ನು ನೀಡುತ್ತಾರೆ. 1-2 ಘಟನೆ ಬಿಟ್ಟರೆ ನೂರಕ್ಕೆ ನೂರರಷ್ಟು ಅರ್ಹರಿಗೆ ಸ್ಥಾನ ನೀಡಲಾಗಿದೆ. ವರಿಷ್ಠರ ನಿರ್ಧಾರದ ಮೇಲೆಯೇ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಎಂದು ಹೇಳಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮುಖ್ಯಮಂತ್ರಿ ಸ್ಥಾನ ಪಡೆಯಲು 2,500 ಕೋಟಿ ಹಣ ಕೊಡಬೇಕು ಎಂದು ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ನಾಯಕರು ಯತ್ನಾಳ್ ವಿರುದ್ಧ ಕಿಡಿಕಾರಿದ್ದರು. ಯಾರನ್ನೇ ಕೇಳಿದರೂ ಯತ್ನಾಳ್ ವಿರುದ್ಧ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದರು. ಇದೀಗ ಶಾಸಕ ಯತ್ನಾಳ್ ಯು ಟರ್ನ್ ಹೊಡೆದಿದ್ದಾರೆ.

ಡಿಕೆಶಿ ವಿರುದ್ಧ ಗುಡುಗು: ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದ ಯತ್ನಾಳ್, ಡಿ.ಕೆ.ಶಿವಕುಮಾರ್ ಗೆ ನನ್ನ ಕಂಡರೆ ಭಯ. ನನ್ನ ಮೇಲೆ 200 ಕೋಟಿ ರೂ. ಮಾನಹಾನಿ ಕೇಸ್ ಹಾಕಿದ್ದಾರೆ. ಮಾನಹಾನಿ ಕೇಸ್ ಹಾಕಿದ್ದಾಗಿನಿಂದಲೂ ಡಿಕೆಶಿಗೆ ಭಯ ಹೆಚ್ಚಾಗಿದೆ. ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ ಅದಕ್ಕೆ ಡಿಕೆಶಿಗೆ ಭಯ. ಯತ್ನಾಳ್ ಬಂದುಬಿಟ್ಟರೆ ನಮ್ಮ ಗತಿಯೇನು ಎಂಬ ಭಯವಿದೆ. ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ಮಾಡಿದ್ದಾರೆ. ಅದಾಗ್ಯೂ ಡಿಕೆಶಿ ಏನೇ ಮಾಡಿದರೂ ಅಂಜುವ ಮಗ ನಾನಲ್ಲ ಎಂದು ಹೇಳಿದರು.

ಹಗರಣಗಳು ಹೊರಗೆ ಬರಲಿ: ಪಿಎಸ್‍ಐ ಹಗರಣದಲ್ಲಿ ಮಾಜಿ ಸಿಎಂ ಪುತ್ರ ಇದ್ದಾರೆ ಎಂಬ ಎಚ್‍ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಮಾಜಿ ಸಿಎಂ ಪುತ್ರ ಯಾರೆಂದು ಹೇಳಲಿ. ಎಲ್ಲದರ ಬಗ್ಗೆಯೂ ಚರ್ಚೆಯಾಗಬೇಕು. ಇಂತಹ ಎಷ್ಟೇ ಹಗರಣಗಳಿದ್ದರೂ ಹೊರಗೆ ಬಂದು ಜನರಿಗೆ ನ್ಯಾಯ ಸಿಗಲಿ ಎಂದರು.

ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಶಿಫಾರಸು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಸಮಿತಿ ಶಿಫಾರಸು ಮಾಡಿದೆ. ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನೆ ಮಾಡಲಾಗಿದೆ. ಹಲವು ಬಾರಿ ಮುಜುಗರದ ಹೇಳಿಕೆ ನೀಡಿರುವ ಬಗ್ಗೆ ವರದಿ ನೀಡಲಾಗಿದೆ. ರಾಜ್ಯ ಶಿಸ್ತು ಸಮಿತಿ ಯತ್ನಾಳ್ ಸಂಪರ್ಕ ಮಾಡಲು ಪ್ರಯತ್ನಿಸಿದೆ. ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವಿವರಣೆ ಪಡೆಯಲು ಸಮಿತಿ ಯತ್ನಿಸಿದೆ. ಆದರೆ, ಶಾಸಕರು ದೂರವಾಣಿ ಕರೆಯನ್ನು ಸ್ವೀಕರಿಸಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News