ಪಿಎಸ್ಸೈ ನೇಮಕಾತಿ ಹಗರಣ ಸಂಬಂಧ ಸಿಐಡಿ ಮೂರನೆ ನೋಟಿಸ್ ನೀಡಿದೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಮೇ 7: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಮೂರನೆ ನೋಟಿಸ್ ನೀಡಿದ್ದು, ಇದು ರಾಜಕೀಯ ಪ್ರೇರಿತ ಮಾತ್ರವಲ್ಲ ಬಾಯಿ ಮುಚ್ಚಿಸುವ ಕ್ರಮವಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗಿಂತಲೂ ಹೆಚ್ಚು ಕಾನೂನು ಜ್ಞಾನ ನನಗೂ ಇದೆ. ಆದರೆ, ಉದ್ದೇಶಪೂರ್ವಕವಾಗಿ ನನ್ನ ಬಾಯಿ ಮುಚ್ಚಿಸಲು ಇದೇ ರೀತಿ ನೋಟಿಸ್ ನೀಡುತ್ತಿದ್ದರೆ, ನೀವು ಬಹಳ ತಪ್ಪು ಮಾಡುತ್ತಿದ್ದೀರಾ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದರು.
ಈ ನೋಟಿಸ್‍ಗಳ ವಿರುದ್ಧ ನಾನೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಕ್ಕುಚ್ಯುತಿ ಮಂಡನೆ ಸೇರಿದಂತೆ ನನಗಿರುವ ಕಾನೂನು ಆಯ್ಕೆಗಳನ್ನೂ ಬಳಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ನೋಟಿಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ. ಅಕ್ರಮದ ಬಗ್ಗೆ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ಅಲ್ಲದೆ, ಪಿಎಸ್ಸೈ ಅಕ್ರಮ ಬಗ್ಗೆ ನ್ಯಾಯಯುತ ತನಿಖೆ ನಡೆಯುತ್ತಿಲ್ಲ. ಹೀಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಒತ್ತಾಯಿಸಿದರು.