ಚಿಕ್ಕಮಗಳೂರು: ಬಿಜೆಪಿಯೇತರ ನಗರಸಭೆ ಸದಸ್ಯರ ವಾರ್ಡ್‍ಗಳಿಗೆ ಸೌಲಭ್ಯ ನೀಡುವಲ್ಲಿ ತಾರತಮ್ಯ: ನಗರಸಭೆ ಸದಸ್ಯೆ ಆರೋಪ

Update: 2022-05-07 16:16 GMT

ಚಿಕ್ಕಮಗಳೂರು, ಮೇ 7: ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಹಾಗೂ ಅಧಿಕಾರಿಗಳು ಬಿಜೆಪಿಯೇತರ ನಗರಸಭೆ ಸದಸ್ಯರ ವಾರ್ಡ್‍ಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಒದಗಿಸುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ವಾರ್ಡ್ ನಂ.23ರ ಮೀಸಲು ವಾರ್ಡ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಈ ಸಂಬಂಧ ನಗರಸಭೆಗೆ ಕ್ರಮಕ್ಕೆ ಆಗ್ರಹಿಸಿದರೂ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಗರಸಭೆಯ 23ನೇ ವಾರ್ಡ್ ಸದಸ್ಯೆ ಮಂಜುಳಾ ಶ್ರೀನಿವಾಸ್ ಆರೋಪಿಸಿದ್ದಾರೆ.

ಈ ಸಂಬಂಧ ಶನಿವಾರ ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ವಾರ್ಡ್ ನಂ.23ರಲ್ಲಿ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರು ಪೂರೈಕೆಗೆ ಕ್ರಮವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಇದುವರೆಗೂ ಸ್ಪಂದಿಸಿಲ್ಲ. ವಾರ್ಡ್ ವ್ಯಾಪ್ತಿಯ ತಮಿಳು ಕಾಲನಿಯಲ್ಲಿ ನೀರು ಬಿಡುವ ವಾಟರ್ ಮ್ಯಾನ್ ಒಬ್ಬರು ಮನಬಂದಂತೆ ನೀರು ಬಿಡುತ್ತಿದ್ದು, ಉದ್ದೇಶಪೂರ್ವಕವಾಗಿ ನೀರು ಪೂರೈಕೆ ಮಾಡದೇ ಜನರಿಗೆ ತೊಂದರೆ ನೀಡುತ್ತಿದ್ದಾರೆ. ವಾಟರ್ ಟ್ಯಾಂಕ್ ಮೂಲಕವಾದರೂ ನೀರು ಪೂರೈಕೆ ಮಾಡಿ ಎಂದು ನೀರು ಪೂರೈಕೆ ವಾಹನಕ್ಕೆ ಕರೆ ಮಾಡಿದರೇ ಸಂಬಂಧಿಸಿದ ಇಂಜಿನಿಯರ್ ಇದುವರೆಗೂ ಕರೆ ಸ್ವೀಕರಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಅವರು ಆರೋಪಿಸಿದರು.

ತಮಿಳು ಕಾಲನಿಯಲ್ಲಿ ಹೆಚ್ಚಾಗಿ ದಲಿತರೇ ವಾಸ ಮಾಡುತ್ತಿದ್ದು, ಇಲ್ಲಿನ ಜನರಿಗೆ ಸಕಾಲದಲ್ಲಿ ನೀರು ಪೂರೈಕೆ ಮಾಡದೇ ನಗರಸಭೆ ಅಧಿಕಾರಿಗಳು ದಲಿತರನ್ನು ಕಡೆಗಣಿಸಿದ್ದಾರೆ. ಇದೇ ಕಾಲನಿಯಲ್ಲಿ ಯಜಿಡಿ ಸಂಪರ್ಕಗಳು ಹಾಳಾಗಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಇಡೀ ಕಾಲನಿ ಗಬ್ಬು ನಾರುತ್ತಿದ್ದು, ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ರಸ್ತೆ ಮೇಲೆ ಯುಜಿಡಿ ಕೊಳಚೆ ನೀರು ಹರಿಯುತ್ತಿರುವುದನ್ನು ಪೊಟೊ ತೆಗೆದು ನಗರಸಭೆ ಅಧಿಕಾರಿಗಳಿಗೆ ಕಳುಹಿಸಿ ದೂರು ನೀಡಿ 8 ದಿನ ಕಳೆದರೂ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.

ವಾರ್ಡಿನ ಸಮಸ್ಯೆಗಳ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ದೂರು ನೀಡಿದರೂ ಇದುವರೆಗೂ ಕ್ರಮವಹಿಸದೇ ತಾರತಮ್ಯ ಎಸಗಲಾಗುತ್ತಿದೆ. ನಗರಸಭೆ ಅಧ್ಯಕ್ಷರು ಸ್ವಚ್ಛತೆ ಬಗ್ಗೆ ಮಾತನಾಡುತ್ತಾರೆ, ಆದರೆ ವಾರ್ಡ್ ನಂ.23ರಲ್ಲಿ ನೈರ್ಮಲ್ಯ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಇದುವರೆಗೂ ಭೇಟಿ ನೀಡಿ ಪರಿಶೀಲಿಸಿಲ್ಲ. ಹಲವು ಬಾರಿ ಮನವಿ ಮಾಡಿದರೂ ಸ್ವಚ್ಛತೆಗೆ ಕಾಳಜಿ ತೋರಿಲ್ಲ ಎಂದು ದೂರಿದ ನಗರಸಭೆ ಸದಸ್ಯೆ ಮಂಜುಳಾ, ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಬಿಜೆಪಿ ಸದಸ್ಯರ ವಾರ್ಡ್‍ಗಳಿಗೆ ಆಧ್ಯತೆ ನೀಡುತ್ತಿದ್ದು, ಬಿಜೆಪಿಯೇತರ ನಗರಸಭೆ ಸದಸ್ಯರ ವಾರ್ಡ್‍ಗಳ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಅಧ್ಯಕ್ಷರು, ಪೌರಾಯುಕ್ತರು ಕೂಡಲೇ ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ನಗರಸಭೆ ಕಚೇರಿ ಎದುರು ಏಕಾಂಗಿ ಧರಣಿ ಹಮ್ಮಿಕೊಳ್ಳುತ್ತೇನೆಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News