ಮಡಿಕೇರಿ: ರಾಷ್ಟ್ರಪತಿ ಆಡಳಿತಕ್ಕಾಗಿ ಒತ್ತಾಯಿಸಿ ಎಸ್‍ಡಿಪಿಐ ಧರಣಿ

Update: 2022-05-07 16:20 GMT

ಮಡಿಕೇರಿ : ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಜೆಪಿ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಗರದಲ್ಲಿ ಪ್ರತಿಭಟನೆ ನಡೆಸಿತು.

ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೃಹತ್ ಜನಾಂದೋಲನ ಹಮ್ಮಿಕೊಂಡಿರುವ ಎಸ್‍ಡಿಪಿಐ ಮಡಿಕೇರಿಯಲ್ಲಿ ಮುಖ್ಯಮಂತ್ರಿಗಳ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿತು.  

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರ ಅರಾಜಕತೆ ಸೃಷ್ಟಿಯಾಗಿದೆ. ಭ್ರಷ್ಟಾಚಾರ, ಜನವಿರೋಧಿ ನೀತಿ, ಬಿಜೆಪಿ ಸಚಿವರ ಹಗರಣಗಳು, ಪೊಲೀಸ್ ದೌರ್ಜನ್ಯ, ಆರೆಸ್ಸೆಸ್ ಪ್ರಾಯೋಜಿತ ದಾಳಿಗಳು ಇದೆಲ್ಲವೂ ದೊಡ್ಡ ಮಟ್ಟದ ಅರಾಜಕತೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯದೆ ಕೋಮು ಧ್ರುವೀಕರಣದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.  

ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣಕ್ಕಾಗಿ ಜಾರಿಯಲ್ಲಿದ್ದ ಹಲವು ಯೋಜನೆಗಳನ್ನು ಸರಕಾರ ಕೈ ಬಿಟ್ಟಿದೆ ಮತ್ತು ಉಳಿದಿರುವ ಯೋಜನೆಗಳಿಗೆ ಬಿಡುಗಡೆ ಮಾಡುತ್ತಿದ್ದ ಹಣವನ್ನು ಕಡಿತಗೊಳಿಸಲಾಗಿದೆ ಎಂದು ದೂರಿದರು.

ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಮನ್ಸೂರ್ ಆಲಿ ಮಾತನಾಡಿ, ಸ್ವಾತಂತ್ರ್ಯದ ನಂತರ ರಾಜ್ಯದಲ್ಲಿ ಕಂಡರಿಯದ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬದಲಾವಣೆಯ ಗಾಳಿ ಬೀಸಲಿದೆ ಎಂಬ ಆಶಾಭಾವನೆ ಜನರಲ್ಲಿತ್ತು. ಆದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಬಷೀರ್, ಜಿಲ್ಲಾ ಸದಸ್ಯ ಅಬ್ದುಲ್ ಅಡ್ಕರ್, ವಿರಾಜಪೇಟೆ ಕ್ಷೇತ್ರದ ಅಧ್ಯಕ್ಷ ಹನೀಫ್ ಕೊಂಡಂಗೇರಿ, ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News