×
Ad

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಅಕ್ರಮ ಪ್ರಕರಣ: ಸಚಿವ ಅಶ್ವಥ್ ನಾರಾಯಣ್ ವಿರುದ್ಧ ತನಿಖೆ ನಡೆಸಲು ದೂರು

Update: 2022-05-07 22:07 IST
ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು, ಮೇ 7: ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸೇರಿದಂತೆ ಹಲವ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಕೆಎಸ್‍ಒಯು ವಿವಿಯ ಕುಲಸಚಿವ ರಾಜಣ್ಣ, ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ್, ನಿವೃತ್ತ ಪ್ರಾಧ್ಯಾಪಕ ಶಿವಲಿಂಗಯ್ಯ, ಕೆಎಸ್‍ಒಯು ಪ್ರಾಧ್ಯಾಪಕ ಅಪ್ಪಾಜಿಗೌಡ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ವಿವಿಯ ಕುಲಸಚಿವ ಪ್ರೊ.ನಾಗರಾಜ್, ಸಂಶೋಧನಾ ವಿದ್ಯಾರ್ಥಿನಿ ಸೌಮ್ಯಾ ಎಂಬಾಕೆಯನ್ನು ಬಂಧಿಸಲಾಗಿದೆ. ಆದರೆ, ಈ ಅಕ್ರಮದಲ್ಲಿ ಹಲವರು ಭಾಗಿಯಾಗಿರುವ ಅನುಮಾನವನ್ನು ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ ಎಂದರು.

ಮತ್ತೊಂದೆಡೆ 1,242 ವಿವಿಧ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಸುಮಾರು 600 ಹುದ್ದೆಗಳಿಗೆ 35ರಿಂದ 75 ಲಕ್ಷ ರೂಪಾಯಿವರೆಗೂ ಹಣ ವಸೂಲಿ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಮುಖವಾಗಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ಇಂಗ್ಲಿಷ್ ವಿಭಾಗದ ಹುದ್ದೆಗಳ ಓಎಂಆರ್ ಪ್ರತಿಯನ್ನೇ ತಿದ್ದಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಫಲಿತಾಂಶ ಪ್ರಕಟವಾಗಿಲ್ಲ ಎಂದು ಅವರು ತಿಳಿಸಿದರು.

ಈ ಅಕ್ರಮದಲ್ಲಿ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಓಎಂಆರ್ ತಿದ್ದಿದ ನಂತರ ವಾಟ್ಸಾಪ್ ಮೂಲಕ ಅಭ್ಯರ್ಥಿಗಳಿಗೆ ಶಿವಲಿಂಗಯ್ಯ ಖಾತ್ರಿ ಪಡಿಸಿಕೊಳ್ಳಲು ಕಳುಹಿಸಿದ್ದಾರೆ ಎಂದು ಆರೋಪಿಸಿದ ಅವರು, ಶಿವಲಿಂಗಯ್ಯ ಮಾದರಿಯಲ್ಲಿಯೇ ನಾಲ್ಕು ಮಂದಿ ಮಧ್ಯವರ್ತಿಗಳನ್ನು ನೇಮಿಸಿ ಅಕ್ರಮ ನಡೆಸಲಾಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಅವರು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News