×
Ad

ಎಲ್‍ಪಿಜಿ ದರ ಏರಿಕೆ ವಿರೋಧಿಸಿ ಎಸ್‍ಯುಸಿಐ ಪ್ರತಿಭಟನೆ

Update: 2022-05-07 22:12 IST

ಬೆಂಗಳೂರು, ಮೇ 7: ಕೇಂದ್ರ ಸರಕಾರ ದಿನೆ ದಿನೆ ಎಲ್‍ಪಿಜಿ ದರ ಏರಿಕೆ ಮಾಡುತ್ತಿರುವ ಕ್ರಮ ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಜಮಾಯಿಸಿದ ಎಸ್‍ಯುಸಿಐ ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯರು, ಕೇಂದ್ರ ಹಾಗೂ ರಾಜ್ಯ ಸರಕಾರ ವಿರುದ್ಧ ಘೋಷಣೆ ಕೂಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ಖಂಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‍ಯುಸಿಐ(ಕಮ್ಯುನಿಸ್ಟ್) ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಸೋಮಶೇಖರ್, ಅಚ್ಚೇ ದಿನ್ ಎಂದರೆ ಅದಾನಿ, ಅಂಬಾನಿ ಸೇರಿ ಉದ್ಯಮಿಗಳಿಗೆ ಅಚ್ಚೇ ದಿನ್ ಹೊರತು ಇದು ಜನ ಸಾಮಾನ್ಯರಿಗಲ್ಲ. ಉಚಿತವಾಗಿ ಸಿಲಿಂಡರ್ ಕೊಡುತ್ತೇವೆ ಎಂದು ಹೇಳಿ ಈಗ ಕೇಂದ್ರ ಸರಕಾರವು ಏಕಾಏಕಿ 50 ರೂ., ಏರಿಕೆ ಮಾಡಿದೆ ಎಂದು ಟೀಕಿಸಿದರು.

ಈ ಬೆಲೆ ಏರಿಕೆಯ ಪ್ರಹಾರವು ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿಯೊಂದು ಕ್ಷೇತ್ರ ಖಾಸಗೀಕರಣಗೊಳಿಸುತ್ತಿರುವ ಬಿಜೆಪಿ ಸರಕಾರವು ಇತ್ತೀಚೆಗೆ ಕಾರ್ಫೋರೇಟ್ ಧಣಿಗಳ 68,000 ಕೋಟಿ ಸಾಲವನ್ನು ಮನ್ನಾ ಮಾಡಿದೆ. ಸಾಮಾನ್ಯ ಜನರನ್ನು ವಂಚಿಸಿ ಹಗಲು ದರೋಡೆಗೆ ಸರಕಾರವು ಮುಂದಾಗಿದೆ ಎಂದು ಆರೋಪಿಸಿದರು.

ಎಸ್‍ಯುಸಿಐ ರಾಜ್ಯ ಸಮಿತಿ ಸದಸ್ಯೆ ಬಿ.ಆರ್.ಅಪರ್ಣಾ ಮಾತನಾಡಿ, ಡಬಲ್ ಇಂಜಿನ್ ಸರಕಾರವೆಂದು ಹೇಳಿಕೊಂಡು ಡಬಲ್ ದರೋಡೆ ನಡೆಯುತ್ತಿದೆ. ಒಂದೆಡೆ ಜನಸಾಮಾನ್ಯರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಬೆಲೆ ಏರಿಕೆಯನ್ನು ಹಿಂಪಡೆಯದೆ ಇದ್ದರೆ ಈ ಹೋರಾಟವನ್ನು ಮತ್ತಷ್ಟು ಬಲಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಸ್‍ಯುಸಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಅಜಯ್‍ಕಾಮತ್ ಮಾತನಾಡಿ, ಕಾಂಗ್ರೆಸ್ ಸರಕಾರದ ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಸರಕಾರವು ತಾನು ಅಧಿಕಾರ ವಹಿಸಿಕೊಂಡಾಗ ತೆರಿಗೆಯ ಮೇಲೆ ತೆರಿಗೆ ವಿಧಿಸಿ ಜನರನ್ನು ಲೂಟಿ ಹೊಡೆಯುತ್ತಿದೆ. ಶೇ.248ರಷ್ಟು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ನಿರೋದ್ಯೋಗ, ವೇತನಕಡಿತ ಹೆಚ್ಚಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News