ಸಿಎಂ ಹುದ್ದೆಗೆ ಲಂಚ ನೀಡಬೇಕೆಂಬುದು ಗಂಭೀರ ಆರೋಪ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2022-05-07 17:02 GMT

ಹುಬ್ಬಳ್ಳಿ, ಮೇ 7: ‘ಸಿಎಂ ಹುದ್ದೆಗೆ ಲಂಚ ನೀಡಬೇಕೆಂಬುದು ಗಂಭೀರ ಆರೋಪ, ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ಎಂದೂ ಕೇಳಿಲ್ಲ. ಈ ವಿಚಾರವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜಕೀಯ ಪಕ್ಷವಾಗಿ ನಾವು ರಾಜ್ಯದ ಪ್ರತಿ ತಾಲೂಕಿನಲ್ಲೂ ಜನರಿಗೆ ತಿಳಿಸಲು ಈ ಕುರಿತು ಹೋರಾಟ ರೂಪಿಸುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಸರ್ಕಿಟ್ ಹೌಸ್‍ನಲ್ಲಿ ಮಾತನಾಡಿದ ಅವರು, ‘ಈ ಹಗರಣಗಳ ಬಗ್ಗೆ ಮೊದಲು ತನಿಖೆ ಮಾಡಬೇಕು. ಅದು ಕೇಂದ್ರ ತನಿಖಾ ಸಂಸ್ಥೆಗಳಿಂದಲೇ ತನಿಖೆ ಆಗಬೇಕು. ಸಿಎಂ ರಾಜೀನಾಮೆ ಪಡೆಯುವುದು, ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ರಾಜಿನಾಮೆ ಕೊಡಿ ಎಂದು ಆಗ್ರಹಿಸಿದ ಮಾತ್ರಕ್ಕೆ ಅವರು ರಾಜೀನಾಮೆ ನೀಡುತ್ತಾರಾ?' ಎಂದು ಪ್ರಶ್ನಿಸಿದರು.

‘ಸಿಎಂ ಹುದ್ದೆಗೆ 2,500 ಕೋಟಿ ರೂ.ಲಂಚ ಎಂಬುದು ಇಡೀ ದೇಶವೇ ತಲ್ಲಣಗೊಳ್ಳುವ ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು, ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಇನ್ನು ಮಂತ್ರಿ ಸ್ಥಾನಕ್ಕೆ 50ರಿಂದ 100 ಕೋಟಿ ರೂ.ಹಣ ನೀಡಬೇಕೆಂದು ಕೇಳಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಸಿಎಂ ತಮ್ಮ ಪಕ್ಷದ ಗೌರವ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಅವರಿಗೆ ರಾಜಕೀಯ ಬದ್ಧತೆ ಇದ್ದರೆ ರಾಜ್ಯದಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು' ಎಂದು ಆಗ್ರಹಿಸಿದರು.

‘ಈ ಸರಕಾರ ಹುಟ್ಟಿದ್ದೇ ಶಾಸಕರನ್ನು ಖರೀದಿ ಮಾಡಿ. ಶಾಸಕ ಶ್ರೀನಿವಾಸಗೌಡ ವಿಧಾನಸಭೆಯಲ್ಲಿ ಸಚಿವ ಅಶ್ವಥ್ ನಾರಾಯಣ ಹಾಗೂ ಯೋಗೀಶ್ವರ್ 30 ಕೋಟಿ ರೂ.ಹಣ ನೀಡುವುದಾಗಿ ಹೇಳಿ 5 ಕೋಟಿ ರೂ. ಮುಂಗಡ ಕೊಟ್ಟು ಹೋಗಿದ್ದರು. ಬಿ.ಸಿ.ಪಾಟೀಲ್ ಮತ್ತಿತರ ನಾಯಕರುಗಳು ಆಮಿಷ ಒಡ್ಡಿರುವ ಸಂಭಾಷಣೆ ಗಮನಿಸಿದ್ದೇವೆ. ಹೆಬ್ಬಾರ್, ರಹೀಂ ಖಾನ್ ಈ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು. ಅಂತಿಮವಾಗಿ ಬಿಜೆಪಿಯವರು ಆಪರೇಷನ್ ಕಮಲದಲ್ಲಿ ಯಶಸ್ವಿಯಾಗಿ ಈ ಸರಕಾರ ರಚಿಸಿದ್ದಾರೆ. ನಂತರ ನಡೆದ ಉಪಚುನಾವಣೆಗಳಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿತ್ತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು' ಎಂದು ಹೇಳಿದರು. 

‘ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿರುವಾಗ ಸರಕಾರ ತನಿಖೆ ನಡೆಸದೆ ಸುಮ್ಮನೆ ಕೂತಿರುವುದು ಏಕೆ? ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿರುವುದು ಏಕೆ? ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಹೆಸರಲ್ಲಿ ಸಿಬಿಐಗೆ ತನಿಖೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಎಜಿ ಸಲಹೆ ನೀಡಿದರೂ ಯಡಿಯೂರಪ್ಪ ಸಿಬಿಐ ವಿಚಾರಣೆಗೆ ಅನುಮತಿ ಕೊಟ್ಟಿದ್ದರು. ಎಲ್ಲ ಅಕ್ರಮಗಳನ್ನು ಸಿಎಂ ರಕ್ಷಣೆ ಮಾಡುತ್ತಿದ್ದಾರೋ ಅಥವಾ ಅವರ ಪಕ್ಷದವರು ರಕ್ಷಣೆ ಮಾಡುತ್ತಿದ್ದಾರೋ? ಆ ಮೂಲಕ ಸಂವಿಧಾನವನ್ನು ಸುಡಲು ನಿರ್ಧರಿಸಿದ್ದಾರೋ? ಈ ಪ್ರಶ್ನೆಗಳಿಗೆ ಸಿಎಂ ಉತ್ತರ ನೀಡಬೇಕು' ಎಂದು ಆಗ್ರಹಿಸಿದರು.

ಪಿಎಸ್ಸೈ ನೇಮಕಾತಿ ಸೇರಿದಂತೆ ಎಲ್ಲ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದೆ. ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News