ಹುಲಿ ಉಗುರು ಮಾರಾಟ ಯತ್ನ: ಮಡಿಕೇರಿ ಸಿಐಡಿ ಅರಣ್ಯ ಘಟಕದಿಂದ ಇಬ್ಬರು ಆರೋಪಿಗಳ ಬಂಧನ

Update: 2022-05-07 17:10 GMT

ಮಡಿಕೇರಿ: ಹುಲಿಯ 4 ಉಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಗುಂಡ್ಲುಪೇಟೆ ಮೂಲದ ಕುಮಾರ ಹಾಗೂ ವಿನು ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. 

ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯ ಚೈನ್‍ಗೇಟ್ ಬಳಿಯಲ್ಲಿರುವ ಬಸ್ ನಿಲ್ದಾಣದ ಎಡ ಬದಿಯಲ್ಲಿ ಇಬ್ಬರು ಹುಲಿಯ 4 ಉಗುರುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಡಿಕೇರಿ ತಾಲ್ಲೂಕು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಇದನ್ನು ಆಧರಿಸಿ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. 4 ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪ್ರಬಾರ ಅಧೀಕ್ಷಕ ಎನ್.ಟಿ. ಶ್ರೀನಿವಾಸ್ ರೆಡ್ಡಿ ಮಾರ್ಗದರ್ಶನದಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ಸಿ.ಯು.ಸವಿ, ಸಿಬ್ಬಂದಿಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ, ಸ್ವಾಮಿ ಹಾಗೂ ಮಂಜುನಾಥ್ ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News