ಬೆಂಗಳೂರು: ಶೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ಮೂವರು ಆರೋಪಿಗಳ ಬಂಧನ

Update: 2022-05-07 17:44 GMT

ಬೆಂಗಳೂರು, ಮೇ 7: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಲಹೆ ನೀಡುವುದಾಗಿ ಸಾರ್ವಜನಿಕರಿಗೆ ಕರೆ ಮಾಡಿ ನಂಬಿಸಿ ವಂಚನೆ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಳ್ಳಾರಿ ಜಿಲ್ಲೆಯ ದೇವಿನಗರದ ರಹಮತ್(29), ಪಾರ್ವತಿ ನಗರದ ಮಲ್ಲಯ್ಯಸ್ವಾಮಿ(29), ಶಿರಿಗುಪ್ಪದ ದುರ್ಗಪ್ಪ(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್‍ ಶೆಟ್ಟಿ ತಿಳಿಸಿದ್ದಾರೆ.

ಆರೋಪಿಗಳು ಮೇಕಿಂಗ್ ಟಾಪಿಕ್ ಎಂಬ ಕಂಪೆನಿಯನ್ನು ತೆರೆದಿದ್ದು, ಇದು ಸ್ಟಾಕ್ ಮಾರ್ಕೆಟ್ ಕಂಪೆನಿಯಾಗಿದ್ದು, ಹಣ ನೀಡಿದರೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಟಿಪ್ಸ್‍ಗಳನ್ನು ನೀಡುವುದಾಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು.

ಆರೋಪಿಗಳ ವಂಚನೆ ಸಂಬಂಧ ದಾಖಲಾಗಿದ್ದ ದೂರನ್ನಾಧರಿಸಿ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಹಲವೆಡೆ ವಂಚನೆ ನಡೆದಿದ್ದು, ತಂತ್ರಜ್ಞಾನ ಆಧರಿಸಿ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಆರೋಪಿಗಳಿಂದ 3 ಮೊಬೈಲ್, 6 ಸಿಮ್‍ಕಾರ್ಡ್‍ಗಳನ್ನು ವಶಪಡಿಸಿಕೊಂಡಿರುವ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News