ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ಲಾರಿ ಹರಿದು ನಾಲ್ಕು ಮಂದಿ ಮೃತ್ಯು

Update: 2022-05-08 03:18 GMT

ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದವರ‌ ಮೇಲೆ ಡಿಜೆ ಇದ್ದ ಮಿನಿ ಲಾರಿ ಹರಿದು ನಾಲ್ಕು ಮಂದಿ ಮೃತಪಟ್ಟಿದ್ದು, 10ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಸೇಡಂ ತಾಲೂಕಿನ ಮೆದಕ ತಾಂಡಾದ ಸುಗಣಾಬಾಯಿ ಚೌವ್ಹಾಣ (40), ತೆಲಂಗಾಣದ ದುಂಕುಡನಾಯಕ ತಾಂಡಾದ ವಿಜ್ಜಿಬಾಯಿ ರಾಥೋಡ್ (30) ಹಾಗೂ ಕುಮಾರನಾಯಕ ರಾಥೋಡ್ (35) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಮದನಾ ತಾಂಡದ ಯುವಕ ಹಾಗೂ ಕಡತಾಲ ತಾಂಡಾದ ಯುವತಿಯ ಮದುವೆ ಗುರುವಾರ ಕಡತಾಲ ತಾಂಡಾದಲ್ಲಿ ನಡೆಯಬೇಕಾಗಿತ್ತು. ಮದುವೆಯ ಹಿಂದಿನ‌ ದಿನ (ಬುಧವಾರ) ಮದುಮಗಳನ್ನು ಕಡತಾಲ ತಾಂಡಾಕ್ಕೆ ಕರೆದುಕೊಂಡು ಬರಲಾಗಿದೆ. ಮದುಮಗಳನ್ನು ಸ್ವಾಗತಿಸಲು ತೆಲಂಗಾಣದಿಂದ‌ ತರಿಸಲಾಗಿದ್ದ ಡಿಜೆ ಹಾಕಿ ರಾತ್ರಿ ಮೆರವಣಿಗೆ ನಡೆಯುತ್ತಿತ್ತು. ಬೇರೆ ಊರುಗಳಿಂದ ಆಗಮಿಸಿದ್ದ ನೆಂಟರು, ಸಂಬಂಧಿಕರು, ಕುಣಿದು ಸಂಭ್ರಮಿಸುತ್ತಿದ್ದರು.

ಲಾರಿ ಚಾಲಕ ಇಲ್ಲದಿದ್ದಾಗ ಅಪರಿಚಿತನೋರ್ವ ಲಾರಿ ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News