ಹಾಸನ | ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: ಗ್ರಾಪಂ ಅಧ್ಯಕ್ಷನ ಬಂಧನ
Update: 2022-05-08 12:40 IST
ಹಾಸನ, ಮೇ 8: ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಹಾಸನ ಜಿಲ್ಲೆಯಲ್ಲಿ ಗ್ರಾಪಂ ಅಧ್ಯಕ್ಷರೊಬ್ಬರನ್ನು ಬಂಧಿಸಿದ್ದಲ್ಲದೆ, ಹಲವರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವಮೂರ್ತಿ ಬಂಧನಕ್ಕೊಳಗಾದವರು. ಇವರನ್ನು ವಿಚಾರಣೆಗೆಂದು ಕರೆಸಿಕೊಂಡ ಸಿಐಡಿ ಬಳಿಕ ಬಂಧಿಸಿದೆ.
ಪಿಎಸ್ಸೈ ಆಯ್ಕೆ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿದ್ದ ಬೆಕ್ಕ ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ್ ಎಂಬವರ ಪುತ್ರ ವೆಂಕಟೇಶ್ ನನ್ನು ಸಿಐಡಿ ತಂಡ ವಶಕ್ಕೆ ಪಡೆದಿದೆ. ಚಂದ್ರಶೇಖರ್ ಬಂಧಿತ ಬೆಕ್ಕ ಗ್ರಾಪಂ ಅಧ್ಯಕ್ಷ ಕೇಶವಮೂರ್ತಿಯ ಆಪ್ತರಾಗಿದ್ದಾರೆ. ಚಂದ್ರಶೇಖರ್ ಪಿಎಸ್ಸೈ ನೇಮಕಾತಿಯಲ್ಲಿ ಗ್ರಾಪಂ ಮಾಜಿ ಸದಸ್ಯ ಕೇಶವಮೂರ್ತಿ ಮೂಲಕ ತನ್ನ ಪುತ್ರನನ್ನು ಆಯ್ಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವೆಂಕಟೇಶ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.