×
Ad

ರಾಜ್ಯದಲ್ಲಿ ಕಾಂಗ್ರೆಸ್ , ಜೆಡಿಎಸ್‍ನ ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ: ನಳಿನ್ ಕುಮಾರ್ ಕಟೀಲ್

Update: 2022-05-08 17:15 IST

ಬೆಂಗಳೂರು, ಮೇ 8: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಮತ್ತು ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದು, ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಪಟ್ಟಿ ಮಾಡಲು ಪುರುಸೊತ್ತಿಲ್ಲದಷ್ಟು ಮುಖಂಡರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರುವುದು ಖಚಿತ' ಎಂದು ಭರವಸೆ ವ್ಯಕ್ತಪಡಿಸಿದರು.

‘ಭಾರತದಲ್ಲಿರುವ ಸುಮಾರು ಶೇ.60ರಷ್ಟು ಯುವಕರು ಜಗತ್ತಿನ ಭವಿಷ್ಯವನ್ನೇ ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸ್ವಾತಂತ್ರ್ಯಾನಂತರ ಭಾರತ ರಾಮರಾಜ್ಯ ಆಗಬೇಕೆಂಬ ಆಶಯ ಗಾಂಧಿ ಅವರದಾಗಿತ್ತು. ವ್ಯಕ್ತಿ ನಿರ್ಮಾಣ, ಸಂಕಲ್ಪ, ಗುರಿ ನೀಡುವ ಕಾರ್ಯ ಆಗಬೇಕು. ಇದರಿಂದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದಿದ್ದರು. ಅದೇ ಪರಿಕಲ್ಪನೆಯಡಿ ಬಿಜೆಪಿ ಮುಂದುವರಿಯುತ್ತಿದೆ ಎಂದು ತಿಳಿಸಿದರು. 

ಬೇರೆ ಪಕ್ಷದಲ್ಲಿ ಪರಿವಾರದಿಂದ ಬರಬೇಕು. ಇಲ್ಲವೇ ಪರಿವಾರದಪರವಾಗಿ ಇದ್ದು ಮೇಲೆ ಬರಬೇಕೆಂಬ ಪದ್ಧತಿ ಇದೆ. ಆದರೆ, ಚಹಾ ಮಾರಬಲ್ಲ ವ್ಯಕ್ತಿಯೂ ಪ್ರಧಾನಿ ಆಗಬಲ್ಲರು ಎಂದು ಬಿಜೆಪಿ ತೋರಿಸಿಕೊಟ್ಟಿದೆ. ಬೇರೆ ಪಕ್ಷಗಳಲ್ಲಿ ಜಾತಿ, ಆರ್ಥಿಕ ಅಥವಾ ಪರಿವಾರದ ಬಲ ಇರಬೇಕು. ಬಿಜೆಪಿಯಲ್ಲಿ ಅಂತಹ ಪರಿವಾರದ ಹಿನ್ನೆಲೆ ಬೇಕಿಲ್ಲ. ತಾಯಿ ಭಾರತಿಯನ್ನು ಜಗದ್ವಂದ್ಯ ಮಾಡುವ ದೃಷ್ಟಿಯಿಂದ ಬಂದವರು ಇಲ್ಲಿ ನಾಯಕತ್ವ ವಹಿಸುತ್ತಾರೆ ಎಂದು ನುಡಿದರು.

ಹಿಂದೆ ಮಂತ್ರಿ ಮಾಗಧರ ಮನೆ ಬಾಗಿಲಿಗೆ ತಿರುಗಾಡುತ್ತಿದ್ದವರಿಗೆ ಪದ್ಮಶ್ರೀ ಪ್ರಶಸ್ತಿ ಬರುತ್ತಿತ್ತು. ಹಣ್ಣು ಮಾರಾಟ ಮಾಡಿ ಶಿಕ್ಷಣಕ್ಕೆ ನೆರವಾದ ಹಾಜಬ್ಬ, ಕಾಡಿನ ಸಂರಕ್ಷಣೆ ಮಾಡುವ ತುಳಸಿ ಗೌಡ ಮತ್ತಿತರ ಜನಸಾಮಾನ್ಯರಿಗೆ ಇಂತಹ ಪ್ರಶಸ್ತಿ ಸಿಗುತ್ತಿದೆ. ಇದು ನೈಜ ಪರಿವರ್ತನೆ ಎಂದ ಅವರು, ರಾಜಕೀಯ ಪಕ್ಷವೊಂದು ಅಧಿಕಾರ ಪಡೆಯಲು ತಂತ್ರಗಾರಿಕೆ ಮಾಡುವುದು ಅನಿವಾರ್ಯ. ಆದರೆ, ಬಿಜೆಪಿ ತನ್ನ ಗುರಿ, ನಡೆಯಲ್ಲಿ ವ್ಯತ್ಯಾಸ ಮಾಡುವುದಿಲ್ಲ' ಎಂದರು.

‘ಮತಾಂತರ  ನಿಷೇಧ, ಗೋಹತ್ಯೆ ನಿಷೇಧದ ಸಂಕಲ್ಪದಿಂದ ಹಿಂದೆ ಹೋಗಿಲ್ಲ. 370ನೆ ವಿಧಿಯನ್ನು ರದ್ದು ಮಾಡಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರದಲ್ಲೂ ಗುರಿಯತ್ತ ಮುನ್ನಡೆ ಸಾಧಿಸಲಿದ್ದೇವೆ. ಪಕ್ಷಕ್ಕಾಗಿ ದುಡಿದ ಸಾಮಾನ್ಯರಲ್ಲಿ ಸಾಮಾನ್ಯರೆನಿಸಿದ ಶಾಂತಾರಾಮ ಸಿದ್ದಿ, ಪ್ರತಾಪಸಿಂಹ ನಾಯಕ್ ಶಾಸಕರಾಗಲು ಬಿಜೆಪಿ ಅವಕಾಶ ಕೊಟ್ಟಿದೆ. ಅದು ಬಿಜೆಪಿಯ ವಿಶಿಷ್ಟತೆ ಮತ್ತು ಅದು ವಿಭಿನ್ನ ಎಂದರು.

ಅಧಿಕಾರವೇ ಗುರಿಯಾಗಿ ಕೆಲಸ ಮಾಡಬೇಡಿ. ಇದೊಂದು ಈಶ್ವರೀಯ ಕಾರ್ಯ. ಕಾಂಗ್ರೆಸ್‍ನಲ್ಲಿ ಒಂದು ಕುಟುಂಬದ ವ್ಯಕ್ತಿಗಳಿಗೆ ಜೈಕಾರ ಕೂಗಲಾಗುತ್ತದೆ. ಆದರೆ, ಕೌಟುಂಬಿಕವಾದ ಇಲ್ಲದ ಬಿಜೆಪಿ ಬೆಳೆಯುತ್ತಾ ಸಾಗಿದೆ. ಜಗತ್ತಿನ ಅತಿದೊಡ್ಡ ಪಕ್ಷವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ. ಇದೀಗ ಮೋದಿ ಯುಗ ಪ್ರಾರಂಭವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‍ಗೆ ರಾಜ್ಯ ಪದಾಧಿಕಾರಿಗಳ ಘೋಷಣೆಗೆ ಎರಡು ವರ್ಷ ಬೇಕಾಯಿತು. ಅದು ರಾಜ್ಯದಲ್ಲಿ ಸತ್ತು ಹೋಗಿದೆ. ಒಂದು ಪಕ್ಷ ನಡೆಸಲು ಅಸಾಧ್ಯವಾದ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸರಕಾರ ನಡೆಸಲು ಸಾಧ್ಯವೇ? ಕಾಂಗ್ರೆಸ್ ಐಸಿಯು ಒಳಗಿದೆ. ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ. ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಬೂತ್‍ಗೆ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಕ ಆದರೂ ಆಚ್ಚರಿಯಿಲ್ಲ. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡದೆ ಕಾಂಗ್ರೆಸ್ ಸೋಲುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ನಾವು ರಾಜಕಾರಣದ ಮೂಲಕ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಪಕ್ಷವು ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ವ್ಯಕ್ತಿತ್ವ ಮತ್ತು ಚಾರಿತ್ರ್ಯ ಒಂದೇ ನಾಣ್ಯದ ಎರಡು ಮುಖಗಳು. ಚಾರಿತ್ರ್ಯ ಮತ್ತು ವ್ಯಕ್ತಿಗಳ ಮೂಲಕವೇ ನಾವು ದೇಶ ನಿರ್ಮಾಣಕ್ಕೆ ಹೊರಟಿದ್ದೇವೆ ಎಂದ ಅವರು, ಭ್ರಷ್ಟಾಚಾರ ಮತ್ತು ಕಳಂಕರಹಿತ ಆಡಳಿತವನ್ನು 8 ವರ್ಷಗಳ ಕಾಲ ಮೋದಿ ತಂಡ ನೀಡಿದೆ. ಸಿದ್ಧರಾಮಯ್ಯರಿಗೆ 1ಕೋಟಿ ರೂ.ವಾಚ್ ಕೊಟ್ಟವರು ಯಾರು?, ಅರ್ಕಾವತಿ ಮತ್ತು ರೀಡು ಕುರಿತ ಕೆಂಪಣ್ಣ ಆಯೋಗದ ವರದಿ ಹೊರಹಾಕಿದರೆ ಸಿದ್ಧರಾಮಯ್ಯ ಶಾಶ್ವತವಾಗಿ ಜೈಲಿನಲ್ಲಿ ಇರುತ್ತಾರೆ. ಅದನ್ನು ಹೊರಕ್ಕೆ ಹಾಕುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News