ಪೊಲೀಸ್ ಮುಂಭಡ್ತಿಗೆ ಆದೇಶ

Update: 2022-05-08 13:18 GMT

ಬೆಂಗಳೂರು, ಮೇ 8: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಹಿನ್ನೆಲೆ ಹುದ್ದೆ ಆಧಾರಿತ ಪದ್ಧತಿ ಅಳವಡಿಸಿ, ಕೂಡಲೇ ಮುಂಭಡ್ತಿ ಪರಿಗಣಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

ಪ್ರಸಕ್ತ ವಿದ್ಯಮಾನಗಳಲ್ಲಿ ಪಿಎಸ್ಸೈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ತಡವಾಗುವ ಸಂಭವವಿರುವುದರಿಂದ ಹುದ್ದೆಯಾಧಾರಿತ ಪದ್ಧತಿ ಅಳವಡಿಸಿ ತಮ್ಮ ವಲಯ, ಕಮೀಷನರೇಟ್ ಘಟಕಗಳಲ್ಲಿನ ಎಲ್ಲಾ ಮುಂಭಡ್ತಿ ಹುದ್ದೆಗಳಿಗೆ ಕೂಡಲೇ ಮುಂಭಡ್ತಿ ನೀಡುವಂತೆ ತಿಳಿಸಿದ್ದಾರೆ.

ಅದೇ ರೀತಿ,  ಮುಂಭಡ್ತಿಗೆ ಅರ್ಹರಿರುವ, ಒಂದು ವರ್ಷದ ಅವಧಿಯಲ್ಲಿ ವಯೋ ನಿವೃತ್ತಿ ಹೊಂದಲಿರುವ, ವಯೋಮಿತಿ ಅಂಚಿನಲ್ಲಿರುವ ಎಎಸ್ಸೈಗಳಿಗೆ ಮುಂಭಡ್ತಿ ಹುದ್ದೆಗಳು ಇಲ್ಲದಿದ್ದಲ್ಲಿ ಅಂತಹ ಸಿಬ್ಬಂದಿಗೆ ಜೇಷ್ಟತೆ ಮತ್ತು ಮುಂಭಡ್ತಿಗೆ ಪರಿಗಣಿಸುವ ತೃಪ್ತಿಕರ ಸೇವೆಯನ್ನು ಆಧರಿಸಿಕೊಂಡು ನಿಯಮಗಳ ಅನುಸಾರ ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಕರ್ನಾಟಕ ನಾಗರೀಕ ಸೇವಾ ನಿಯಮ 32-ಅಡಿ ತಾತ್ಕಾಲಿಕವಾಗಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.

ಸ್ವತಂತ್ರ ಪ್ರಭಾರವು ತಾತ್ಕಾಲಿಕವಾಗಿದ್ದು, ಯಾವುದೇ ಜೇಷ್ಠತೆ ಮತ್ತು ಪೂರ್ವಾನ್ವಯವಾಗುವ ಮುಂಭಡ್ತಿ ಹಕ್ಕೊತ್ತಾಯ ಮಾಡುವಂತಿಲ್ಲವೆಂಬ ಹಾಗೂ ನೇರ ನೇಮಕಾತಿ ಅಭ್ಯರ್ಥಿಗಳು ವರದಿ ಮಾಡಿದ ಕೂಡಲೇ ಸ್ವತಂತ್ರ ಪ್ರಭಾರದ ಮುಂಭಡ್ತಿಯು ರದ್ದುಗೊಳ್ಳಲ್ಪಡುತ್ತದೆ. ಈ ಅಂಶದ ಬಗ್ಗೆ ಅವರಿಂದ ಲಿಖಿತ ಒಪ್ಪಿಗೆ ಪತ್ರ, ಮುಚ್ಚಳಿಕ ಪತ್ರ ಪಡೆದು ನಂತರ ನಿಯಮಾನುಸಾರ ಸ್ವತಂತ್ರ ಪ್ರಭಾರದಲ್ಲಿರಿಸುವ ಕ್ರಮ ಕೈಗೊಳ್ಳುವಂತೆ ಅವರು ಉಲ್ಲೇಖಿಸಿದ್ದಾರೆ.

ಸಂಬಂಧಪಟ್ಟ ವಲಯ ಕಮೀಷನರೇಟ್ ಘಟಕಾಧಿಕಾರಿಗಳು ಕೂಡಲೇ ಹುದ್ದೆ ಆಧಾರಿತ ಪದ್ಧತಿ ಅಡಿ ತಮ್ಮ ವಲಯ, ಕಮೀಷನರೇಟ್ ಘಟಕಗಳಲ್ಲಿನ ಮುಂಭಡ್ತಿ ಹುದ್ದೆಗಳಿಗೆ ಕೂಡಲೇ ಮುಂಭಡ್ತಿ, ಸ್ವತಂತ್ರ ಪ್ರಭಾರದಲ್ಲಿರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News