×
Ad

ಜಿಎಸ್‌ಟಿ, ಪಾಲಿಕೆಯ ಜಾಹೀರಾತು ತೆರಿಗೆ ಬೇರೆ ಬೇರೆ: ಹೈಕೋರ್ಟ್

Update: 2022-05-08 18:51 IST

ಬೆಂಗಳೂರು, ಮೇ 8: ಸರಕು ಮತ್ತು ಸೇವಾ ತೆರಿಗೆ ಬೇರೆ ಮತ್ತು ಮಹಾನಗರ ಪಾಲಿಕೆಗಳು ವಿಧಿಸುವ ಜಾಹೀರಾತು ತೆರಿಗೆ ಬೇರೆ ಬೇರೆ, ಒಂದಕ್ಕೊಂದು ಸಂಘರ್ಷವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 

ಹುಬ್ಬಳ್ಳಿ-ಧಾರವಾಡ ಜಾಹೀರಾತುದಾರರ ಸಂಘ ಮತ್ತು ಹಲವು ಜಾಹೀರಾತು ಸಂಸ್ಥೆಗಳು ಹುಬ್ಬಳ್ಳಿ ಮಹಾನಗರ ಪಾಲಿಕೆ ಹೊರಡಿಸಿದ್ದ ಜಾಹೀರಾತು ತೆರಿಗೆ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ನ್ಯಾಯಪೀಠ, ಈ ಮಹತ್ವದ ಆದೇಶ ನೀಡಿದೆ. 

ಸರಕು ಮತ್ತು ಸೇವಾ ಕಾಯ್ದೆಯಡಿ ಜಿಎಸ್‍ಟಿ ವಿಧಿಸುವ ಅಧಿಕಾರವಿದೆ ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‍ ಕಾಯ್ದೆಯ ಸೆಕ್ಷನ್ 134 ರ ಅಡಿಯಲ್ಲಿ ಜಾಹೀರಾತು ಶುಲ್ಕ ಅಥವಾ ಜಾಹೀರಾತು ತೆರಿಗೆಯನ್ನು ವಿಧಿಸುವ ರಾಜ್ಯದ ಮುನ್ಸಿಪಲ್ ಕಾರ್ಪೊರೇಷನ್‍ಗಳ ಅಧಿಕಾರದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಹೈಕೋರ್ಟ್ ಘೋಷಿಸಿದೆ. 

ಕೋರ್ಟ್ ಆದೇಶವೇನು? ಜಾಹೀರಾತು ತೆರಿಗೆ ಅಥವಾ ಜಾಹೀರಾತು ಶುಲ್ಕದ ವಿಧಿಸುವುದು ಅರ್ಜಿದಾರರಿಗೆ ಹೋಡಿರ್ಂಗ್ ಹಾಕಲು ಅಥವಾ ಹೋಡಿರ್ಂಗ್‍ಗಳನ್ನು ಬಳಸಲು ಅನುಮತಿ ನೀಡುವ ಪರವಾನಗಿಯನ್ನು ಅವಲಂಬಿಸಿರುತ್ತದೆ. ಆದರೆ ಈ ಜಾಹೀರಾತು ತೆರಿಗೆ ಅಥವಾ ಶುಲ್ಕದ ಸಂಭವನೀಯತೆ, ಸೇವೆ ಅಥವಾ ಸರಕುಗಳನ್ನು ಪಡೆಯುವುದಕ್ಕೆ ವಿಧಿಸುವ ತೆರಿಗೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. 

ಪಾಲಿಕೆಯೊಂದಿಗಿನ ವ್ಯವಹಾರವು ಹೋಡಿರ್ಂಗ್ ಹಾಕಲು ಅನುಮತಿ ಅಥವಾ ಪರವಾನಗಿಗಾಗಿ ಅಥವಾ ನಿಗಮಕ್ಕೆ ಸೇರಿದ ಭೂಮಿಯಲ್ಲಿ ಅಥವಾ ಖಾಸಗಿಯವರಿಗೆ ಸೇರಿದ ಭೂಮಿಯಲ್ಲಿ ಹೋಡಿರ್ಂಗ್ ಅನ್ನು ಬಳಸುವುದಕ್ಕಾಗಿ ಎಂದು ಹೇಳಿರುವ ನ್ಯಾಯಾಲಯವು, ಒಂದು ಸ್ವತಂತ್ರ ಮತ್ತು ವಿಭಿನ್ನ ವಹಿವಾಟು ಆಗುತ್ತದೆ ಮತ್ತು ದುಪ್ಪಟ್ಟು ತೆರಿಗೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಜಿಎಸ್‍ಟಿ ತೆರಿಗೆಯನ್ನು ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುತ್ತದೆ. ಜಾಹೀರಾತು ವ್ಯವಹಾರವನ್ನು ನಡೆಸುತ್ತಿರುವ ಅರ್ಜಿದಾರರು ಹೇಳಲಾದ ವ್ಯವಹಾರದ ಸಮಯದಲ್ಲಿ ಅರ್ಜಿದಾರರು ಅದರ/ಅವರ ಯಾವುದೇ ಗ್ರಾಹಕರಿಂದ ಜಿಎಸ್‍ಟಿಯನ್ನು ಸಂಗ್ರಹಿಸಬೇಕಾಗುತ್ತದೆ ಮತ್ತು ಅದನ್ನು ಅಧಿಕಾರಿಗಳಿಗೆ ರವಾನಿಸಬೇಕಾಗುತ್ತದೆ. ಅರ್ಜಿದಾರರು ತಮ್ಮ ಜೇಬಿನಿಂದ ಜಿಎಸ್‍ಟಿ ಪಾವತಿ ಮಾಡುತ್ತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

ಅರ್ಜಿದಾರರ ವಾದವೇನು? ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕಾಯ್ದೆ ಜಾರಿಯಾದ ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ದುಪ್ಪಟ್ಟು ತೆರಿಗೆ ವಿಧಿಸುತ್ತಿದೆ ಮತ್ತು ಆದುದರಿಂದ ಜಾಹೀರಾತು ಹೋಡಿರ್ಂಗ್‍ಗಳಿಗೆ ಅನುಮತಿ ನೀಡಲು ಜಾಹೀರಾತು ಏಜೆನ್ಸಿಗಳಿಗೆ ಜಾಹೀರಾತು ತೆರಿಗೆ ಅಥವಾ ಶುಲ್ಕವನ್ನು ವಿಧಿಸಲು ಪಾಲಿಕೆಗೆ ಅಧಿಕಾರವಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News