ಕನ್ನಡ ಶಿಶು ಗೀತೆಗಳಿಗೆ ಮರು ಜೀವ ತುಂಬಬೇಕು: ಆರ್.ಜಿ.ಹಳ್ಳಿ ನಾಗರಾಜ
ಬೆಂಗಳೂರು, ಮೇ 8: ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಕವಿಗಳು ಬರೆದ ಶಿಶುಗೀತೆಗಳು ಇವತ್ತು ಮೌಲ್ಯಗಳನ್ನು ಉಳಿಸಿಕೊಂಡದ್ದು, ಅವುಗಳಿಗೆ ನವಪೀಳಿಗೆಯ ಕವಿಗಳು ಮರುಜೀವ ತುಂಬಬೇಕು ಎಂದು ಕವಿ ಆರ್.ಜಿ. ಹಳ್ಳಿ ನಾಗರಾಜ ಅಭಿಪ್ರಾಯಪಟ್ಟರು.
ಮಾಗಡಿ ರಸ್ತೆಯ ನ್ಯೂ ಹಾರ್ಡ್ ವಿಕ್ ಇಂಡಿಯನ್ ಸ್ಕೂಲ್ ಆವರಣದಲ್ಲಿ ‘ರಂಗೋತ್ರಿ' ಮಕ್ಕಳ ಮನೋವಿಕಾಸ ಸಂಸ್ಥೆ ಏರ್ಪಡಿಸಿದ್ದ ಬೇಸಗೆ ಶಿಬಿರದ ಮಕ್ಕಳ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತಾಡಿದ ಅವರು, ‘ಇವತ್ತು ಕನ್ನಡ ಶಿಶುಗೀತೆ, ಮಕ್ಕಳ ಕತೆಗಳು ಅವಜ್ಞೆಗೆ ಗುರಿಯಾಗಿವೆ. ಆದರೆ, ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದಪೈ, ನಂತರದ ರಾಷ್ಟ್ರಕವಿ ಕುವೆಂಪು, ಕವಿಗಳಾದ ಬೇಂದ್ರೆ, ಜಿ.ಪಿ.ರಾಜರತ್ನಂ, ಕಾವ್ಯಾನಂದ, ನವಗಿರಿನಂದ, ಹೊಯಿಸಳ ಮೊದಲಾದ ಹೆಸರಾಂತ ಕವಿಗಳು ಶಿಶುಗೀತೆಯ ರಚನೆ ಮಾಡುವ ಮೂಲಕ ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರುಗಳ ಹಾದಿಯಲ್ಲಿ ಯುವಕವಿಗಳು ಹೆಜ್ಜೆಹಾಕಿ ಶಿಶುಗೀತೆ ರಚನೆಕಡೆ ಗಮನಹರಿಸಬೇಕು’ ಎಂದರು.
‘ಇಂಗ್ಲಿಷ್ ಶಿಕ್ಷಣದ ಹೆಚ್ಚಳ, ರೈಮ್ಸ್ ಭರಾಟೆಯಲ್ಲಿ ಕನ್ನಡ ಶಿಶುಗೀತೆಗೆ ಹಿನ್ನೆಡೆಯಾಗಿದೆ. ಜೊತೆಗೆ ಮಕ್ಕಳ ಮನೋವಿಕಾಸಕ್ಕಾಗಿ ರಂಜನೀಯ ಕತೆಗಳು ಸೃಷ್ಟಿಯಾಗಬೇಕು. ಅವರಲ್ಲಿ ಮಾನಸಿಕ, ಬೌದ್ಧಿಕ ಬೆಳವಣಿಗೆ ಆಗಬೇಕು. ಮಕ್ಕಳ ವಿಕಾಸಕ್ಕಾಗಿಯೇ ಇರುವ ಅಕಾಡೆಮಿ, ಸಂಘ - ಸಂಸ್ಥೆಗಳೂ ಕನ್ನಡದಲ್ಲಿನ ಶಿಶುಗೀತೆಗಳ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ಅವರು ಕರೆ ನೀಡಿದರು.
ಬೆಂಗಳೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಸಿ.ಬಿ.ಹೊನ್ನುಸಿದ್ಧಾರ್ಥ ಅವರು ಮಾತನಾಡಿ, ‘ಮಕ್ಕಳ ಮನೋವಿಕಾಸಕ್ಕೆ ಸಾಹಿತ್ಯ ಸಂಸ್ಕೃತಿಯ ಅರಿವು ಮುಖ್ಯವಾಗಿದೆ. ಅವರಿಗೆ ಎಳೆಯ ವಯಸ್ಸಿನಲ್ಲೇ ವೈಚಾರಿಕ ಅರಿವು ಮೂಡಿಸುವುದು ಮುಖ್ಯ. ರಂಗೋತ್ರಿಯಂಥ ಸಂಸ್ಥೆ ಬೇಸಿಗೆ ಶಿಬಿರದ ಮೂಲಕ ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ’ ಎಂದರು.
ಗೋಷ್ಠಿಯಲ್ಲಿ ನಳಂದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಿ.ಎಚ್. ನಾಯಕ್, ರಂಗೋತ್ರಿಯ ಸಂಸ್ಥಾಪಕ ನಿರ್ದೇಶಕ ಕೆ.ಎಚ್. ಕುಮಾರ, ಕವಿ ಗುಂಡಿಗೆರೆ ವಿಶ್ವನಾಥ, ನ್ಯೂ ಹಾರ್ಡ್ ವಿಕ್ ಇಂಡಿಯನ್ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಕಾರ್ಯದರ್ಶಿ ಕುಮಾರಿ ಕೆ.ಕೆ. ಪೂರ್ಣ ಅವರುಗಳು ಉಪಸ್ಥಿತರಿದ್ದರು.