ಪಠ್ಯಪುಸ್ತಕದಲ್ಲಿ ತಾಯಿ ಮಹತ್ವ ಬಗ್ಗೆ ತಿಳಿಸಿಕೊಡಿ: ಎಂಎಲ್‍ಸಿ ದಿನೇಶ್ ಗೂಳಿಗೌಡ ಪತ್ರ

Update: 2022-05-08 16:32 GMT

ಬೆಂಗಳೂರು, ಮೇ 8: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಬಾಲ್ಯದಿಂದಲೇ ಸಂಬಂಧಗಳ ಮಹತ್ವವನ್ನು ತಿಳಿಸಿ ಕೊಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಚಿಂತನೆಯನ್ನು ನಡೆಸಬೇಕಿದೆ ಎಂದು ಮೇಲ್ಮನೆ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

ರವಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು, ಮಕ್ಕಳಿಗೆ ನೈತಿಕ ಪ್ರಜ್ಞೆಯನ್ನು ಬೆಳೆಸುವ ಕೆಲಸ ಆಗಬೇಕಿದೆ. ಹಾಗಾಗಿ ಪ್ರಾಥಮಿಕ ಇಲ್ಲವೆ ಪ್ರೌಢ ಶಿಕ್ಷಣದಲ್ಲಿ ಅಮ್ಮನ ಮಹತ್ವ ಸಾರುವ ಪಠ್ಯವನ್ನು ಸೇರಿಸಬೇಕು ಎಂದು ಕೋರಿದ್ದಾರೆ.

ಇಂದು ಸ್ವಾರ್ಥ ಸಮಾಜ ನಿರ್ಮಾಣವಾಗುತ್ತಿದೆ. ಈಗಿನ ಬಹುತೇಕ ಮಕ್ಕಳು ವಿವಾಹವಾದ ತಕ್ಷಣ ನಗರ ಬದುಕನ್ನು ಇಷ್ಟಪಡುತ್ತಿದ್ದು, ನಗರಗಳಿಗೆ ಬಂದು ವಾಸಿಸುತ್ತಿದ್ದಾರೆ. ಇದರಿಂದ ವರ್ಷಕ್ಕೆ ಒಮ್ಮೆ ತಮ್ಮ ತಾಯಿಯನ್ನು ನೋಡಲು ಹೋಗಲು ಆಗುವುದಿಲ್ಲ. ನಗರದ ಜೀವನ ಸುಖ ಎಂದು ಭಾವಿಸಿದ್ದರೂ, ಹೆತ್ತವರಿಗೆ ನೋವು ಕೊಟ್ಟು ಎಷ್ಟೇ ಜೀವನ ಮಾಡಿದರೂ ಸಮೃದ್ಧವಾದ ಬದುಕನ್ನು ಕಾಣಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೆತ್ತವರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ, ವಿದ್ಯಾವಂತರನ್ನಾಗಿ ಮಾಡುತ್ತಾರೆ. ಕೊನೆಗೆ ಅವರಿಗೊಂದು ಸುಂದರ ಬದುಕನ್ನು ಕಟ್ಟಿಕೊಡುತ್ತಾರೆ. ವಿದ್ಯಾವಂತರಾದ ಮಕ್ಕಳು ಬಳಿಕ ವಿದೇಶಗಳಿಗೆ ಹೋಗಿ ನೆಲೆಸುತ್ತಾರೆ. ಹೆತ್ತವರನ್ನು ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ. ಸಾವು ಸಂಭವಿಸಿದ ಸಂದರ್ಭದಲ್ಲಿಯೂ ಅವರುಗಳು ಹೆತ್ತವರ ಮುಖ ನೋಡಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾಟ್ಸ್ ಆಪ್, ಫೇಸ್ಬುಕ್, ಟ್ವಿಟರ್ ಇನ್ಸ್ಟಾಗ್ರಾಮ್‍ಗಳಲ್ಲಿ ಸ್ಟೇಟಸ್ ಹಾಕುವ ಮಟ್ಟಿಗೆ ತಾಯಂದಿರ ದಿನ ಆಚರಣೆಯಾಗುತ್ತಿದೆ. ಆದರೆ ಮನೆಯಲ್ಲಿ ತಾಯಂದಿರನ್ನು ಕಡೆಗಣಿಸಲಾಗುತ್ತಿದೆ. ಇಂಥ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ವಿಷಾದನೀಯ. ಸೋಷಿಯಲ್ ಮೀಡಿಯಾದಲ್ಲಿ ಅಮ್ಮಂದಿರ ದಿನ ಆಚರಿಸಿಕೊಳ್ಳುವುದು ಮುಖ್ಯವಲ್ಲ. ನಿಜ ಜೀವನದಲ್ಲಿ ಅಮ್ಮನನ್ನು ಖುಷಿಯಾಗಿಡುವುದು ಮುಖ್ಯ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News