ಕೋಮು ಸಂಘರ್ಷಗಳಿಗೆ ರಾಜಕಾರಣಿಗಳದ್ದೇ ಕುಮ್ಮಕ್ಕು: ರಂಭಾಪುರಿ ಸ್ವಾಮೀಜಿ ಆರೋಪ
ಧಾರವಾಡ: ಧರ್ಮ ಮತ್ತು ರಾಜಕಾರಣವನ್ನು ಬೆರೆಸುತ್ತಿರುವುದರಿಂದ ಧರ್ಮ ತನ್ನ ಗೌರವ ಕಳೆದುಕೊಳ್ಳುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕೆಲ ರಾಜಕಾರಣಿಗಳು ತಮ್ಮ ಸ್ವಂತ ಲಾಭಕ್ಕಾಗಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ದಂಗೆ ಏಳುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಕೋಮುಗಲಭೆಗಳಿಗೆ ಕಾರಣವಾಗುತ್ತಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
"ಸಮಾಜದಲ್ಲಿ ಶಾಂತಿ ಸ್ಥಾಪಿಸಲು, ಜನರು ತಮ್ಮ ರಾಜಕೀಯ ಮುಖಂಡರ ಪ್ರಚೋದನಾಕಾರಿ ಹೇಳಿಕೆಗಳನ್ನು ತಿರಸ್ಕರಿಸಬೇಕು. ಧಾರ್ಮಿಕ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ರಾಜಕಾರಣಿಗಳು ಜನರನ್ನು ಪ್ರಚೋದಿಸುವ ಕಾರ್ಯದಿಂದ ದೂರ ಇರಬೇಕು" ಎಂದು ಸ್ವಾಮೀಜಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದ ಜನತೆ ಶಾಂತಿಪ್ರಿಯರು. ರಾಜ್ಯದಲ್ಲಿ ಹಿಂದೆ ಕೋಮು ಸಂಘರ್ಷಗಳು ನಡೆದಿಲ್ಲ. ಪ್ರತಿಯೊಬ್ಬರ ಧರ್ಮವನ್ನು ಗೌರವಿಸುವ ಮೂಲಕ, ಜನಸಾಮಾನ್ಯರು ಧಾರ್ಮಿಕ ಸಹಿಷ್ಣುತೆ ಪ್ರದರ್ಶಿಸಿದ್ದರು. ಇದೀಗ ರಾಜಕೀಯ ಹಸ್ತಕ್ಷೇಪದಿಂದಾಗಿ ಸಂಘರ್ಷ ಸ್ಥಿತಿ ಉಂಟಾಗಿದ್ದು, ಇದು ಅರಾಜಕತೆ ಸೃಷ್ಟಿಸುತ್ತಿದೆ. ಯಾವ ಸಮುದಾಯವೂ ಇದರಿಂದ ಪ್ರೇರಿತವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಾರದು" ಎಂದು ಸಲಹೆ ಮಾಡಿದರು.